ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ನಾಯಕತ್ವ ಬದಲಾವಣೆ ಕೂಗು ಜೋರಾಗಿಯೇ ಕೇಳಿ ಬರುತ್ತಿತ್ತು. ಅದರಲ್ಲೂ ಬಿ ಎಸ್ ಯಡಿಯೂರಪ್ಪ ದೆಹಲಿ ಪ್ರವಾಸದಿಂದ ಮರಳಿದ ಬಳಿಕ ಈ ಮಾತಿಗೆ ಪುಷ್ಠಿ ಸಿಕ್ಕಂತಾಗಿತ್ತು. ಕೆಲವರು ಬಿಎಸ್‌ವೈ ಪದತ್ಯಾಗ ಮಾಡುತ್ತಾರೆಂದರೆ, ಇನ್ನೂ ಒಂದಿಷ್ಟು ಜನ ಇದೆಲ್ಲಾ ಊಹಾಪೋಹವೆಂದು ಅಲ್ಲಗಳೆದಿದ್ದರು. ಈ ಎಲ್ಲ ವಿಚಾರಕ್ಕೆ ಇಂದು ಅಂತಿಮ ಉತ್ತರ ದೊರೆತಿದೆ. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಬಿಎಸ್‌ವೈ ಪದತ್ಯಾಗದ ನಿರ್ಧಾರ ತಿಳಿಸಿದರು.
ಸರ್ಕಾರಕ್ಕೆ 2 ವರ್ಷದ ತುಂಬಿದ ದಿನವೇ ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೂ ಮುನ್ನ ಬಿ ಎಸ್ ಯಡಿಯೂರಪ್ಪ ಭಾವುಕ ಭಾಷಣ ಮಾಡಿದರು. ಮಾತನಾಡುತ್ತಾ ವೇದಿಕೆಯ ಮೇಲೆಯೇ ಗದ್ಗದಿತರಾದ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾಗೆ ಕೃತಜ್ಞತೆ ಅರ್ಪಿಸಿದ ಯಡಿಯೂರಪ್ಪ, ಸ್ವಇಚ್ಛೆಯಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ಮುಖ್ಯಮಂತ್ರಿ ಹುದ್ದೆಗೆ ನಾನು ಹೆಸರು ಸೂಚಿಸುವುದಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ, ರಾಜ್ಯಪಾಲರ ಹುದ್ದೆ ಬೇಡ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕಳೆದ 2 ವರ್ಷದಲ್ಲಿ ಸಾಕಷ್ಟು ಅಗ್ನಿಪರೀಕ್ಷೆ ಎದುರಾಯಿತು. ಪ್ರವಾಹ ಬಂದು ಎಲ್ಲೆಡೆ ಹುಚ್ಚನಂತೆ ಸುತ್ತಾಡಬೇಕಾಯಿತು. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆ ಮಾಡೋಣ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಬಳಿಕ ತಮ್ಮ ಸಂಪುಟ ಸಚಿವರ ಜತೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ರಾಜೀನಾಮೆ ನೀಡಿದರು. ಬಿಎಸ್‌ವೈ ರಾಜೀನಾಮೆಯನ್ನು ರಾಜ್ಯಪಾಲ ಗೆಹ್ಲೋಟ್ ಅಂಗೀಕರಿಸಿದರು.
ಇದನ್ನೂ ಓದಿ: ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ..ಭಾವುಕರಾದ ರಾಜಾಹುಲಿ