ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ. ಸರ್ಕಾರ ತನ್ನಷ್ಟಕ್ಕೆ ತಾನೇ ಬೀಳಬಹುದು ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ. ಒಳ ಜಗಳದಿಂದ ಸರ್ಕಾರ ತಾನಾಗಿಯೇ ಬೀಳುತ್ತದೆ. ಅಲ್ಲಿವರೆಗೂ ನಾವು ತಾಳ್ಮೆಯಿಂದ ಕಾಯುತ್ತೇವೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.
37 ಶಾಸಕರ ಸಂಖ್ಯಾ ಬಲದಿಂದ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಜನರ ವಿಶ್ವಾಸ ಅವರಿಗೆ ಇಲ್ಲ. ಆಡಳಿತ ಪಕ್ಷದ ಶಾಸಕರ ವಿಶ್ವಾಸವನ್ನಾದರೂ ಉಳಿಸಿಕೊಂಡಿದ್ದರೆ ಪರವಾಗಿರಲಿಲ್ಲ. ಇತ್ತೀಚೆಗೆ ರೆಸಾರ್ಟ್ನಲ್ಲಿ ನಡೆದ ಸಭೆಯಲ್ಲಿ ಶಾಸಕರು ತಮಗೆ ಮುಖ್ಯಮಂತ್ರಿಯ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಹೈಕಮಾಂಡ್ ನಾಯಕರ ಮೇಲೆ ಮಾತ್ರ ವಿಶ್ವಾಸ ಇದೆ. ಹಾಗಾಗಿ ಸರ್ಕಾರ ನಡೆಯುತ್ತಿದೆ ಎಂದು ಬಿಎಸ್ವೈ ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವರ ಕಚೇರಿ ಸಿಬ್ಬಂದಿಗೆ ಸೇರಿದ ಹಣ ವಿಧಾನಸೌಧದಲ್ಲಿ ಸಿಕ್ಕಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ತಮಗೆ ನೆಮ್ಮದಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ನಾನೊಬ್ಬ ಕ್ಲರ್ಕ್ನ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ನನಗೆ ಯಾವುದೇ ಸ್ವಾತಂತ್ರವಿಲ್ಲ ಎಂದು ಸ್ವತಃ ಸಿಎಂ ಅವರೇ ಹೇಳುತ್ತಿದ್ದಾರೆ. ಇವೆಲ್ಲಾ ಸ್ಥಿತಿಗತಿಗಳನ್ನು ನೋಡಿದ ಮೇಲೆ ರಾಜ್ಯಪಾಲರಿಂದ ಸುಳ್ಳು ಭರವಸೆ ಕೊಡುವುದಾಗಲಿ, ನೀಡುವುದಾಗಲಿ ಯಾವುದು ಸಹ ನಾಡಿನ ಜನರಿಗೆ ಒಪ್ಪಿಗೆ ಇಲ್ಲ. ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಇವತ್ತು ರಾಜ್ಯಪಾಲರ ಭಾಷಣ ಬಹಿಷ್ಕರಿಸಿ ಹೊರ ಬಂದಿದ್ದೇವೆ. ನಾಳೆ ನಮ್ಮ ನಿಲುವನ್ನು ತಿಳಿಸುತ್ತೇವೆ ಎಂದರು.