ಬೆಂಗಳೂರು: ಕಳೆದ ಕೆಲ ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿರುವ ಹಿರಿಯ ರಾಜಕೀಯ ಮುತ್ಸದ್ದಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರನ್ನು ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ದೇವೇಗೌಡರ ಭೇಟಿಯಾದ ಬಿಎಸ್ವೈ: ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದರು. ಈ ವೇಳೆ ದೊಡ್ಡಗೌಡರಿಗೆ ನಮಸ್ಕರಿಸಲು ಯಡಿಯೂರಪ್ಪ ಮುಂದಾದರು. ಆದರೆ ದೇವೇಗೌಡರು ತಡೆದು, ಕೈಹಿಡಿದು ಆತ್ಮೀಯವಾದ ಸ್ವಾಗತ ಕೋರಿದರು. ಕಾಲು ನೋವು ಕುರಿತು ದೇವೇಗೌಡರ ಯೋಗಕ್ಷೇಮ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು.
ರಾಜ್ಯ ರಾಜಕೀಯದಲ್ಲಿ ಸುದೀರ್ಘ ರಾಜಕೀಯ ಜೀವನ ನಡೆಸಿರುವ ದೇವೇಗೌಡರು ಅವಿಶ್ರಾಂತ ರಾಜಕಾರಣಿಯಾಗಿದ್ದಾರೆ. ಪದೇ ಪದೆ ಫಿನಿಕ್ಸ್ ಹಕ್ಕಿಯಂತೆ ರಾಜಕೀಯ ಜೀವನದಲ್ಲಿ ಮೇಲೆದ್ದು ಬಂದಿದ್ದಾರೆ. ಇಳಿ ವಯಸ್ಸಿನಲ್ಲೂ ಜೆಡಿಎಸ್ ಅಸ್ತಿತ್ವ ಉಳಿಸಲು ಶ್ರಮಿಸಿದ್ದಾರೆ. ರಾಷ್ಟ್ರಮಟ್ಟದಲ್ಲೂ ತಮ್ಮ ಛಾಪು ಉಳಿಸಿಕೊಂಡಿರುವ ರಾಜ್ಯದ ಹಿರಿಯ ನಾಯಕರಾಗಿರುವ ದೇವೇಗೌಡರ ಜೊತೆ ರಾಜಕೀಯ ಜೀವನದ ಕುರಿತು ಕೆಲಕಾಲ ಯಡಿಯೂರಪ್ಪ ಮೆಲುಕು ಹಾಕಿದರು.
ದೇವೇಗೌಡರ ಯೋಗಕ್ಷೇಮ ವಿಚಾರಿಸುತ್ತಿರುವ ನಾಯಕರು: ರಾಜಕೀಯವೇ ಬೇರೆ, ಖಾಸಗಿ ಜೀವನವೇ ಬೇರೆಯಾಗಿ ಪರಿಗಣಿಸಿರುವ ಉಭಯ ನಾಯಕರು ಪರಸ್ಪರ ಕೆಲಕಾಲ ಮಾತುಕತೆ ನಡೆಸಿದರು. ಕಳೆದ ದಿನವಷ್ಟೇ ಪ್ರತಿಪಕ್ಷ ನಾಯಕ ಹಾಗೂ ಒಂದು ಕಾಲದಲ್ಲಿ ಗೌಡರ ಒಡನಾಡಿಯಾಗಿದ್ದ ಸಿದ್ದರಾಮಯ್ಯ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು. ಇಂದು ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
(ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ಸಿದ್ದರಾಮಯ್ಯ; ಆರು ವರ್ಷದ ಬಳಿಕ ಗುರು ಶಿಷ್ಯರ ಸಮಾಗಮ)