ಬೆಂಗಳೂರು : ಆರು ವರ್ಷಗಳಿಂದ ಕೋಮಾದಲ್ಲಿದ್ದು, ನರಕ ಯಾತನೆ ಅನುಭವಿಸಿದ ಬಾಲಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಅರೋಪಿಸಿ ತಂದೆ ಈಶ್ವರ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
6 ವರ್ಷಗಳಿಂದ ಕೋಮಾದಲ್ಲಿದ್ದ ವಿಘ್ನೇಶ್ (ಈಗ 20 ವರ್ಷ) ಜನವರಿ 3 ರಂದು ಮೃತಪಟ್ಟಿದ್ದಾನೆ. ಏಪ್ರಿಲ್ 4, 2017 ರಲ್ಲಿ ಹರ್ನಿಯಾ ಚಿಕಿತ್ಸೆಗೆಂದು ಪದ್ಮನಾಭ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ವಿಘ್ನೇಶನನ್ನು ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಸಮಯದಲ್ಲಿ ಆತನಿಗೆ ಮೂರು ಬಾರಿ ಅನಸ್ತೇಷಿಯಾ ನೀಡಿದ್ದರಿಂದ ವಿಘ್ನೇಶ್ ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರಿದ್ದ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ವಿಘ್ನೇಶ್ ಪೋಷಕರು 2017ರಲ್ಲಿ ಬನಶಂಕರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಆಸ್ಪತ್ರೆ ಆಡಳಿತ ಮಂಡಳಿ 5 ಲಕ್ಷ ರೂ. ಹಣ ನೀಡಿತ್ತು. ಚಿಕಿತ್ಸೆಯ ಉಳಿದ 19 ಲಕ್ಷ ರೂ.ಗಳನ್ನು ತಾವೇ ಖರ್ಚು ಮಾಡಿದ್ದಾಗಿ ಪೋಷಕರು ಹೇಳಿಕೊಂಡಿದ್ದಾರೆ.
ಅಂದಿನಿಂದಲೂ ಕೋಮಾದಲ್ಲಿದ್ದ ವಿಘ್ನೇಶ್, ಜನವರಿ 3 ರಂದು ಸಾವನ್ನಪ್ಪಿದ್ದಾನೆ. ಪದ್ಮನಾಭನಗರದ ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ವಿಘ್ನೇಶ್ ಪೋಷಕರು, ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಯುವತಿ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ವಂಚನೆ, ಆರೋಪಿ ಸೆರೆ