ಬೆಂಗಳೂರು: ಹಣಕ್ಕಾಗಿ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಯಲಹಂಕದ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಪ್ರಿಯತಮೆ ಗಂಗಾ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ.
ಪ್ರಿಯಕರ ದಾಂಡೇಲಿ ಮೂಲದ 27 ವರ್ಷದ ಶ್ಯಾಮು ಎಂಬಾತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ ಶ್ಯಾಮು ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯೋಗ ತರಬೇತಿ ಕೇಂದ್ರದಲ್ಲಿ ಯೋಗ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ.
ಮೂರು ವರ್ಷಗಳ ಹಿಂದೆ ಇದೇ ಯೋಗ ತರಬೇತಿ ಕೇಂದ್ರಕ್ಕೆ ಗಂಗಾ ಸೇರಿಕೊಂಡಿದ್ದರು. ಹೀಗೆ ಪರಿಚಯಗೊಂಡಿದ್ದ ಇಬ್ಬರು ಕಾಲಕ್ರಮೇಣ ಪ್ರೇಮಿಗಳಾಗಿದ್ದಾರೆ. ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಎರಡು ಕುಟುಂಬದವರನ್ನು ಒಪ್ಪಿಸಿ ಫೆಬ್ರವರಿಯಲ್ಲಿ ಮದುವೆ ಮಾಡಿಕೊಳ್ಳಲು ಸಿದ್ಧತೆ ಸಹ ನಡೆಸಿದ್ದರು.
ಹಲವು ತಿಂಗಳ ಹಿಂದೆ ಪ್ರಿಯಕರನಿಂದ 1ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ ಗಂಗಾ ಹಲವು ತಿಂಗಳಾದರೂ ಹಣ ವಾಪಸ್ ನೀಡಿರಲಿಲ್ಲ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತಿತ್ತು. ಕಳೆದ ಬುಧವಾರ ರಾತ್ರಿಯೂ ಸಹ ಹಣದ ವಿಚಾರಕ್ಕಾಗಿ ಜಗಳ ಆರಂಭವಾಗಿತ್ತು. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಾಲದ ಹಣ ವಾಪಸ್ ನೀಡುವುದಿಲ್ಲ ಎಂದಿದ್ದಕ್ಕೆ ಅಕ್ರೋಶಗೊಂಡ ಆರೋಪಿ ಯುವತಿಯ ತಲೆಯನ್ನ ಗೋಡೆಗೆ ಕುಟ್ಟಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆದರೆ, ಪೊಲೀಸರೆದುರು ಆತ್ಮಹತ್ಯೆ ಎಂದು ಕಥೆ ಕಟ್ಟಿ ನಂಬಿಸಿದ್ದ, ಆದರೆ, ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: 100 ರೂಪಾಯಿಗೆ ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ ಆರೋಪಿಗಳು.. 2 ತಿಂಗಳ ಬಳಿಕ ಸತ್ಯಾಂಶ ಬಯಲು