ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಬೆಳೆ ಹಾನಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಕೊಡಬೇಕು. ರೈತರ ಸಾಲ ಮನ್ನಾ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಕಾವೇರಿ ಭಾಗದ ಆರು ಜಿಲ್ಲೆಗಳ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕಾವೇರಿ ಕೊಳ್ಳದ ಎಲ್ಲ ಜಿಲ್ಲೆಯ ಪ್ರಮುಖರ ಸಭೆ ನಡೆಸಿದ್ದೇವೆ. ಕಾವೇರಿ ವಿಚಾರದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಿಲ್ಲ. ತಮಿಳುನಾಡಿನವರು ಅಕ್ರಮವಾಗಿ ಕುರುವೈ ಬೆಳೆ ಬೆಳೆದಿದ್ದಾರೆ. 1.8 ಲಕ್ಷ ಹೆಕ್ಟೇರ್ ಬದಲು 4 ಲಕ್ಷ ಹೆಕ್ಟೇರ್ ಬೆಳೆ ಮಾಡಿದ್ದಾರೆ. ನ್ಯಾಯಾಧೀಕರಣದ ಪ್ರಕಾರ ಇದುವರೆಗೆ 32 ಟಿಎಂಸಿ ಬಳಕೆ ಮಾಡಬೇಕಿತ್ತು. ಆದರೆ, 60 ಟಿಎಂಸಿ ನೀರು ಬಳಕೆಯಾಗಿದೆ. ಒಂದು ಬೆಳೆ ಕೈಗೆ ಬಂದು ಎರಡನೇ ಬೆಳೆ ಹಾಕಿದ್ದಾರೆ. ವಾರ್ಷಿಕವಾಗಿ ಮೂರು ಬೆಳೆ ಬೆಳೆಯಲು ಪ್ರತಿ ಬಾರಿಯೂ ಹುನ್ನಾರ ಮಾಡುತ್ತಾರೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ರಾಜ್ಯದಲ್ಲಿದೆ. ನಮ್ಮ ರೈತರಿಗೆ ಶೇ.30ರಷ್ಟು ನೀರನ್ನೂ ಕೊಡಲು ಸಾಧ್ಯವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ ಎಂದರು.
ಕುಡಿಯಲು 18 ಟಿಎಂಸಿ ನೀರು ಬೇಕು. ಆದರೆ 13 ಟಿಎಂಸಿ ಮಾತ್ರ ಸಂಗ್ರಹ ಇದೆ. ಇಂತಹ ಗಂಭೀರ ಪರಿಸ್ಥಿತಿ ಇದ್ದರೂ ಕೂಡ ನಮ್ಮ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಮುಂದೆ ಸರಿಯಾದ ಪ್ರತಿಪಾದನೆ ಮಾಡಲಿಲ್ಲ. ಮೊದಲ ಬಾರಿ 10,000 ಕ್ಯೂಸೆಕ್ ನೀರನ್ನು 15 ದಿನ ಬಿಟ್ಟಿದ್ದಾರೆ. 5,000 ಕ್ಯೂಸೆಕ್ ನೀರನ್ನು ಮತ್ತೆ 15 ದಿನ ಹರಿಸಿದ್ದಾರೆ. ಈಗ ಇನ್ನೊಮ್ಮೆ 5,000 ಕ್ಯೂಸೆಕ್ ನೀರು 15 ದಿನ ಬಿಡಲು ಹೇಳಿದ್ದಾರೆ. ಎರಡನೇ ಪೈರಿಗೆ ನೀರು ಬಿಡುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುವುದರಲ್ಲಿ ನಮ್ಮ ಸರ್ಕಾರದವರು ವಿಫಲರಾಗಿದ್ದಾರೆ ಎಂದು ದೂರಿದರು.
ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದರು. ಆದರೆ ಇದುವರೆಗೂ ಅರ್ಜಿ ಯಾಕೆ ಹಾಕಿಲ್ಲ ಎಂಬ ಬಗ್ಗೆ ಉತ್ತರ ಕೊಟ್ಟಿಲ್ಲ. ಎರಡನೇ ಸರ್ವಪಕ್ಷ ಸಭೆಯಲ್ಲಿಯೂ ಅದಕ್ಕೆ ವಿವರಣೆ ಕೊಟ್ಟಿಲ್ಲ. ಕೇವಲ ತಮಿಳುನಾಡಿನ ಮಧ್ಯಂತರ ಅರ್ಜಿಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಇದುವರೆಗೂ ನಾವು ನೀರು ಹರಿಸಿರುವುದರಿಂದ ನಮಗೆ ಆಗಿರುವ ಸಮಸ್ಯೆ ಏನು?, ತಮಿಳುನಾಡಿಗೆ ಏನಾಗಿದೆ ಎನ್ನುವ ಪ್ರತಿಪಾದನೆ ಮಾಡದೆ ಕೇವಲ ರಕ್ಷಣಾತ್ಮಕವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ ರಾಜ್ಯದ ನೀರಿನ ಹಕ್ಕು ರಕ್ಷಣೆ ಮಾಡಲು ಈ ರಾಜ್ಯ ಸರ್ಕಾರಕ್ಕೆ ಬದ್ಧತೆ ಹಾಗೂ ಯೋಗ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಒಂದು ಲಕ್ಷಕ್ಕಿಂತ ಹೆಚ್ಚು ಹೆಕ್ಟರ್ ಬೆಳೆ ನಾಶವಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನದಲ್ಲಿ ಎಲ್ಲ ಕಡೆ ಬೆಳೆ ನಷ್ಟವಾಗಿದೆ. ಈಗಾಗಲೇ ಕೃಷಿ ಇಲಾಖೆಯವರು ಖುಷ್ಕಿ ಮತ್ತು ಅರೆ ಖುಷ್ಕಿ ಬೆಳೆ ಬೆಳೆಯಿರಿ ಎಂದು ಆದೇಶ ಕೊಟ್ಟಿದ್ದಾರೆ. ಇದರ ಅರ್ಥ ಏನು?. ಈಗ ಬೆಳೆದು ನಿಂತಿರುವ ಭತ್ತ, ಕಬ್ಬು, ತೋಟಗಾರಿಕಾ ಬೆಳೆ ಹಾಗೂ ಮೆಕ್ಕೆಜೋಳದ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಕೊಡದ ಕಾರಣದಿಂದ ರೈತರಿಗೆ ಬೆಳೆ ನಷ್ಟವಾಗಿದೆಯೋ ಆ ಎಲ್ಲ ರೈತರಿಗೂ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಕೊಡಬೇಕು. ಇದರ ಜೊತೆ ಕೂಡಲೇ ಆ ಪ್ರದೇಶದ ಸಾಲ ಮನ್ನಾ ಮಾಡಬೇಕು. ಗಂಭೀರವಾಗಿ ಕಾನೂನು ಹೋರಾಟವನ್ನು ನಡೆಸಬೇಕು. ಇದೇ 21ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಇದೆ. ಈ ವಿಚಾರಣೆಯಲ್ಲಿ ಕರ್ನಾಟಕದ ವಾಸ್ತವಾಂಶದ ಚಿತ್ರಣವನ್ನು ನ್ಯಾಯಾಲಯದ ಮುಂದೆ ಇಡಬೇಕು. ನಾವು ಇಲ್ಲಿಯವರೆಗಿನ ಮಾಹಿತಿ ಪಡೆದಾಗ ಸಮರ್ಪಕವಾದ ಮಾಡದೇ ಇರುವುದು ಗಮನಕ್ಕೆ ಬಂದಿದೆ. ಹಾಗಾಗಿ ಮುಂದೆ ಸಮರ್ಪಕವಾದ ಮಂಡಿಸಬೇಕೆಂದು ಆಗ್ರಹಿಸಿದರು.
ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ: ಸರ್ವಪಕ್ಷ ಸಭೆಯಲ್ಲಿಯೇ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇರುವಾಗ ಪ್ರಧಾನಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು. ಆದರೂ, ರಾಜ್ಯ ಸರ್ಕಾರದವರು ಆ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಮ್ಮ ರಾಜ್ಯಕ್ಕೆ ಸುಪ್ರೀಂ ಕೋರ್ಟ್ಗೆ ಹೋಗುವ ಸಂಪೂರ್ಣ ಹಕ್ಕು ಕಾಯ್ದಿರಿಸಲಾಗಿದೆ. ಅದು ನಮ್ಮ ರಾಜ್ಯದ ಹಕ್ಕು. ಕರ್ನಾಟಕ ಸುಪ್ರೀಂ ಕೋರ್ಟ್ಗೆ ಹೋಗುವ ನಿರ್ಬಂಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮಧ್ಯಂತರ ಅರ್ಜಿ ಸಲ್ಲಿಕೆಗೆ ಕುಂಟು ನೆಪ ಸರಿಯಲ್ಲ ಎಂದು ಕಿಡಿಕಾರಿದರು.
ಒಳ್ಳೆಯ ವಕೀಲರನ್ನೇಕೆ ನೇಮಿಸಬಾರದು?: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಿರಿಯ ನ್ಯಾಯವಾದಿಗಳು ಬಹಳಷ್ಟು ಚೆನ್ನಾಗಿ ಗೊತ್ತಿದ್ದಾರೆ. ಅವರ ಪ್ರಕರಣಗಳಲ್ಲಿ ಕಾನೂನು ಹೋರಾಟ ಮಾಡುತ್ತಾರೆ. ಅದರಲ್ಲಿ ಯಶಸ್ವಿಯಾಗುತ್ತಾರೆ. ಅದೇ ಹಿರಿಯ ವಕೀಲರನ್ನು ಅಥವಾ ಬೇರೆ ವಕೀಲರ ಮೂಲಕ ಕಾವೇರಿ ವ್ಯಾಜ್ಯದ ಪ್ರಕರಣಗಳಲ್ಲಿ ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ವಾದ ಮಾಡಲು ಯಾಕೆ ನೇಮಕ ಮಾಡಬಾರದು?. ಕಾನೂನು ಹೋರಾಟದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಯಶಸ್ಸು ಸಿಗುತ್ತಿದೆ. ಆದರೆ, ರಾಜ್ಯಕ್ಕೆ ಯಶಸ್ಸು ಸಿಗುತ್ತಿಲ್ಲ. ಹಾಗಾಗಿ ಯಾಕೆ ನಿಮ್ಮ ಒಳ್ಳೆಯ ವಕೀಲರನ್ನಾಗಿ ನೇಮಕ ಮಾಡಬಾರದು?. ಕೂಡಲೇ ಆ ಕೆಲಸ ಮಾಡಿ ಎಂಬುವುದು ನನ್ನ ವೈಯಕ್ತಿಕ ಸಲಹೆ ಎಂದು ಬೊಮ್ಮಾಯಿ ಪರೋಕ್ಷವಾಗಿ ಕುಟುಕಿದರು.
ಇದನ್ನೂ ಓದಿ: ಕಾವೇರಿ ರಕ್ಷಣಾ ಯಾತ್ರೆಗೆ ಬಿಜೆಪಿ ಸಜ್ಜು: ಬಿಎಸ್ವೈ ನೇತೃತ್ವದಲ್ಲಿ ಮಹತ್ವದ ಸಭೆ