ಬೆಂಗಳೂರು : ಶಾಸಕರ ಸರಣಿ ಸಭೆ ನಡೆಸಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಡೆಗೆ ತೀವ್ರ ಅಸಮಾಧಾನಗೊಂಡಿರುವ ಬಾಂಬೆ ತಂಡದ ಸದಸ್ಯರು, ಅವರನ್ನು ಬಿಟ್ಟು ಸಭೆ ನಡೆಸಿ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಸಂಜೆ 8 ಗಂಟೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಬಾಂಬೆ ಟೀಂ ಎಂದು ಕರೆಸಿಕೊಳ್ಳುವ ಸದಸ್ಯರು ಸಭೆ ಸೇರುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರ ಇತ್ತೀಚಿನ ಧೋರಣೆಗೆ ಅಸಮಾಧಾನಗೊಂಡಿರುವ ಇತರ ಸದಸ್ಯರು, ಇಂದು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಗೋಪಾಲಯ್ಯ, ಬಿ ಸಿ ಪಾಟೀಲ್, ನಾರಾಯಣಗೌಡ, ಮುನಿರತ್ನ, ವಿಶ್ವನಾಥ್ ಸೇರಿದಂತೆ ಅನೇಕರು ಇಂದು ಸಭೆ ನಡೆಸುತ್ತಿದ್ದಾರೆ.
ಡಾ. ಸುಧಾಕರ್ ಹೊರ ರಾಜ್ಯದಲ್ಲಿರುವ ಕಾರಣ ಅವರನ್ನು ಹೊರತುಪಡಿಸಿ ಉಳಿದವರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಕುಮಠಳ್ಳಿ ಜಾರಕಿಹೊಳಿ, ಇದೀಗ ಜಾರಕಿಹೊಳಿ ಟೀಂ ಆಗಿದ್ದು, ಅವರಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ.
ಸಚಿವ ರಮೇಶ್ ಜಾರಕಿಹೊಳಿ ಸರಣಿ ಸಭೆಗಳನ್ನು ನಡೆಸಿ ರಾಜೀನಾಮೆ ಕೊಟ್ಟು ಬಂದ ಬಾಂಬೆ ಟೀಂನ ದೂರ ಇರಿಸುತ್ತಿರುವುದು ಮತ್ತು ಕರೆಯದೇ ಸಭೆಗಳನ್ನು ಮಾಡುತ್ತಿರುವುದಕ್ಕೆ ಪ್ರತಿಯಾಗಿ ಇಂದು ಉಳಿದವರು ಸಭೆ ಸೇರುತ್ತಿದ್ದಾರೆ ಎನ್ನಲಾಗಿದೆ.