ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳು 198 ರಿಂದ 243 ಕ್ಕೆ ಹೆಚ್ಚಳ ಮಾಡಲು ಸಿಎಂ ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆಂದು ಶಾಸಕ ಹಾಗೂ ಜಂಟಿ ಸಲಹಾ ಸಮಿತಿ ಅಧ್ಯಕ್ಷ ಎಸ್. ರಘು ತಿಳಿಸಿದ್ದಾರೆ.
ಜೊತೆಗೆ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ಗಳ ಮರು ವಿಂಗಡಣಾ ಸಮಿತಿ ರಚಿಸಲಾಗುತ್ತದೆ. ಬಿಡಿಎ ಆಯುಕ್ತರು, ಜಿಲ್ಲಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರು, ಈ ಸಮಿತಿಯಲ್ಲಿರುತ್ತಾರೆ. ಮರು ವಿಂಗಡಣೆ ಬಳಿಕ ಪ್ರತಿ ವಾರ್ಡ್ ನಲ್ಲಿ ಸರಾಸರಿ 35 ಸಾವಿರ ಜನಸಂಖ್ಯೆ ಹೊಂದಲಿದೆ. ಈಗಿರುವ ಜನಸಂಖ್ಯೆ ಪ್ರಕಾರ 35 ಸಾವಿರ ಜನಕ್ಕೆ 241.5 ವಾರ್ಡ್ ಸಾಕಿತ್ತು. ಆದರೆ ಜಂಟಿ ಸಲಹಾ ಸಮಿತಿ ಬೆಸ ಸಂಖ್ಯೆ ಬೇಕು ಎಂಬ ಕಾರಣಕ್ಕೆ ಹಾಗೂ ಸಿಎಂ ಕೂಡಾ 243ಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದರು.
ಇದರಿಂದ ಮೇಯರ್ ಚುನಾವಣಾ ಸಂದರ್ಭದಲ್ಲೂ ಪೈಪೋಟಿ ಇದ್ದರೆ ಬಹುಮತ ಸಾಬೀತಿಗೆ ಸುಲಭವಾಗಲಿದೆ ಎಂದು ವಿವರಿಸಿದರು. ಪಾಲಿಕೆಯ ಹೊರ ವಲಯದ ಐದು ವಲಯಗಳಲ್ಲಿ ಹೆಚ್ಚು ವಾರ್ಡ್ ಗಳನ್ನು ಸೃಷ್ಟಿಸಲಾಗುವುದು. ಆದರೆ ಹೊಸ ಪ್ರದೇಶ ಅಥವಾ ಗ್ರಾಮಗಳನ್ನು ಸೇರಿಸಿಕೊಳ್ಳುವುದಿಲ್ಲ. 243 ವಾರ್ಡ್ ಗಳನ್ನು ಆಯ್ಕೆ ಮಾಡಿರುವುದು, 2+4+3 ಗಳನ್ನು ಕೂಡಿಸಿದರೆ 9 ಆಗುತ್ತದೆ. ಈ ಸಂಖ್ಯೆ ಶುಭ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಸರ್ಕಾರದಿಂದ ಇನ್ನೂ ಡಿಲಿಮಿಟೇಶನ್ ಬಗ್ಗೆ ಆದೇಶ ಬಂದಿಲ್ಲ. ಸರ್ಕಾರದ ಆದೇಶ ಬಂದ ಬಳಿಕ ಆ ಪ್ರಕಾರ ಮಾಡಲಾಗುವುದು ಎಂದರು.