ಬೆಂಗಳೂರು : ಸಾರಿಗೆ ಮುಷ್ಕರದ ಸಮಯದಲ್ಲಿ ಯೋಗೇಶ್ ಎಂಬ ಬಸ್ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕೆಲಸಕ್ಕೆ ಬಂದಿಲ್ಲ ಎಂದು ಆರೋಪಿಸಿ ಬಿಎಂಟಿಸಿ ಇವರನ್ನು ವಜಾ ಮಾಡಿದೆ. ಈ ಸಂಬಂಧ ಬಸ್ ಚಾಲಕ ವಿಡಿಯೋ ಮಾಡುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಸಾರಿಗೆ ನೌಕಕರ ಮುಷ್ಕರದ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿದ್ದ ಯೋಗೇಶ್ ಅತ್ಯಂತ ಕಠಿಣ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂಬಂಧ ಬಿಎಂಟಿಸಿ ಎಂಡಿ ಶಿಖಾ ಅವರು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಆದರೀಗ ಮುಷ್ಕರ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿಲ್ಲ ಎಂದೇಳಿ ಬಿಎಂಟಿಸಿ ಅಧಿಕಾರಿಗಳು ವಜಾ ಮಾಡಿದ್ದಾರೆ ಎಂದು ಯೋಗೇಶ್ ಅಸಮಾಧಾನ ಹೊರ ಹಾಕಿದ್ದಾರೆ.
ಏ. 7 ಮತ್ತು 8ರಂದು ಯೋಗೇಶ್ ಕೆಲಸಕ್ಕೆ ಹಾಜರಾಗಿಲ್ಲ ಎಂದು ಅವರನ್ನು ವಜಾ ಮಾಡಲಾಗಿದೆ. ಆದರೆ ದಾಖಲೆಗಳ ಪ್ರಕಾರ ಏ.7 ಮತ್ತು 8ಕ್ಕೆ ಯೋಗೇಶ್ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಲಭ್ಯವಿದೆ ಎನ್ನಲಾಗುತ್ತಿದೆ.
ಕೊರೊನಾ ಸಂಕಷ್ಟದ ಸಮಯದಲ್ಲೂ ಕೆಲಸಕ್ಕೆ ಹಾಜರಾಗಿದ್ದೆ. ಆದ್ರೆ ಉನ್ನತ ಅಧಿಕಾರಿಗಳು ನಾನು ಕೆಲಸಕ್ಕೆ ಗೈರಾಗಿದ್ದೆ ಎಂದೇಳಿ ನನ್ನನ್ನು ಅಮಾನತುಗೊಳಿಸಿದ್ದಾರೆ ಎಂದು ಬಸ್ ಚಾಲಕ ಯೋಗೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.