ಬೆಂಗಳೂರು: ರಾಜ್ಯದಲ್ಲಿ ಜೂನ್ 7 ರ ಬಳಿಕ ಅನ್ ಲಾಕ್ ಆಗೋದು ಪಕ್ಕಾನಾ ಇಂತಹದೊಂದು ಪ್ರಶ್ನೆ ಕಾಡದೇ ಇರೋಲ್ಲ. ಯಾಕೆಂದರೆ ಅನ್‌ಲಾಕ್ ಆಗುವ ಮುನ್ಸೂಚನೆ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಸಿಬ್ಬಂದಿಗೆ ಬುಲಾವ್ ಬಂದಿದೆ.
ರಾಜ್ಯದಲ್ಲಿ ಲಾಕ್ಡೌನ್-2.0 ಜೂನ್ -7 ಕ್ಕೆ ಅಂತ್ಯವಾಗಲಿದ್ದು, ಇದರ ಬೆನ್ನಲ್ಲೇ ಲಾಕ್ಡೌನ್ ಸಡಿಲಕ್ಕೆ ರಾಜ್ಯ ಸರ್ಕಾರ ಪ್ಲಾನ್ ರೂಪಿಸುತ್ತಿರುವಂತೆ ಕಾಣ್ತಿದೆ. ಇನ್ನು ವ್ಯಾಕ್ಸಿನ್ ಹಾಕಿಸಿಕೊಂಡು, ಕೋವಿಡ್ ಟೆಸ್ಟ್ ಮಾಡಿಕೊಂಡು ಕರ್ತವ್ಯಕ್ಕೆ ಬರುವಂತೆ ಬಿಎಂಟಿಸಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಜೂನ್- 7 ರಿಂದ ಎಲ್ಲಾ ಸಿಬ್ಬಂದಿಯ ಕಡ್ಡಾಯ ಹಾಜರಾತಿ ಬಿಎಂಟಿಸಿ ಆದೇಶಿಸಿದೆ.
ಬಿಎಂಟಿಸಿ ಅವಶ್ಯ ಸೇವೆ ಸಲ್ಲಿಸುವ ಸಂಸ್ಥೆಯಾಗಿದ್ದು, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸಮರ್ಪಕ ಸಾರಿಗೆ ಸೇವೆಯನ್ನು ಬೇಡಿಕೆಗನುಗುಣವಾಗಿ ಒದಗಿಸಬೇಕಾಗಿರುವುದರಿಂದ ಸಾರ್ವಜನಿಕ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದೇ, ಅವರ ಬೇಡಿಕೆ ಮತ್ತು ಅಗತ್ಯಕ್ಕನುಗುಣವಾಗಿ ಸಾರಿಗೆ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಘಟಕದಲ್ಲಿನ ಎಲ್ಲಾ ಚಾಲನಾ ಸಿಬ್ಬಂದಿ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಯ ಮೇಲೆ ಸಂಸ್ಥೆಯ ನಿಯಮಾವಳಿಯಂತೆ ಶಿಸ್ತಿನ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದೆ.