ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದು, ಬಿಎಂಟಿಸಿ ಅಧಿಕಾರಿಗಳು ನೌಕರರ ಮನವೊಲಿಸಲು ಮುಂದಾಗಿದ್ದಾರೆ. ಒಂದು ವೇಳೆ ಒಪ್ಪದಿದ್ದರೇ ನೌಕರರ ವಿರುದ್ಧ ಎಸ್ಮಾ ಅಸ್ತ್ರ ಬಳಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಎಸ್ಮಾ ಕಾಯ್ದೆ ಎಂದರೇನು?:
ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕಲು ಎಸ್ಮಾ(ಅಗತ್ಯ ಸೇವೆ ನಿರ್ವಹಣೆ ಕಾಯ್ದೆ) ಕಾಯ್ದೆ ಪರಿಣಾಮಕಾರಿಯಾಗಿದೆ. ನೌಕರರು ಸಾಮೂಹಿಕ ಮುಷ್ಕರ ಮಾಡಿದಾಗ ಎಸ್ಮಾ ಜಾರಿ ಮಾಡಬಹುದಾಗಿದ್ದು, ಈ ವೇಳೆ ನೌಕರರು ಕಡ್ಡಾಯವಾಗಿ ಕೆಲಸ ಮಾಡಲೇಬೇಕಾಗುತ್ತದೆ. ಒಂದು ವೇಳೆ ಎಸ್ಮಾ ಉಲ್ಲಂಘಿಸಿದ್ರೆ ವಾರೆಂಟ್ ಇಲ್ಲದೆ ಬಂಧನ ಮಾಡಬಹುದು. ಆರು ತಿಂಗಳು ಜೈಲು ವಾಸ ಸಾಧ್ಯತೆ ಹಾಗೂ ಎಸ್ಮಾ ಜಾರಿಯಾದ ಮೇಲೆ ಉದ್ಯೋಗಿ ಪ್ರತಿಭಟನೆಯಲ್ಲಿ ಭಾಗಿಯಾದರೆ ವೇತನ ಭತ್ಯೆ ಮತ್ತು ಇತರೆ ಸವಲತ್ತುಗಳ ಮೇಲೂ ಪರಿಣಾಮ ಬೀಳಲಿದೆ.
ಓದಿ : ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರತಿಭಟನೆ ಕೈಬಿಡಿ: ಡಿಸಿಎಂ ಸವದಿ
ಬಿಎಂಟಿಸಿಯಲ್ಲಿ ಸುಮಾರು 1,30,000ಕ್ಕೂ ಅಧಿಕ ಸಾರಿಗೆ ನೌಕರರಿದ್ದು, ಅವರೆಲ್ಲರೂ ತಮ್ಮ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಇತ್ತ ಡಿಪೋ ಮ್ಯಾನೇಜರ್ಗಳ ಸಂಪರ್ಕಕ್ಕೂ ಸಿಗದೆ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ಇತ್ತ ನೌಕರರ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟುತ್ತಿದ್ದು, ಪ್ರಯಾಣ ಮಾಡಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ. ಸದ್ಯ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದು, ಸಿಎಂ ಯಡಿಯೂರಪ್ಪ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಇದಕ್ಕೆ ಸ್ಪಂದಿಸದೇ ಇದ್ದರೆ ಮುಂದಿನ ಕ್ರಮಕ್ಕೆ ಬಿಎಂಟಿಸಿ ಸಜ್ಜಾಗುತ್ತಿದೆ.