ಬೆಂಗಳೂರು: ಕೆಂಗೇರಿಯ ಲಾಡ್ಜ್ವೊಂದರಲ್ಲಿ ಬಿಎಂಟಿಸಿ ಚಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚನ್ನಪಟ್ಟಣ ಮೂಲದ ಚಾಲಕ ಪುಟ್ಟೇಗೌಡ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿಬಂದಿದೆ. ಕಳೆದ ಆರು ತಿಂಗಳಿನಿಂದ ಬಿಎಂಟಿಸಿ ಚಾಲಕನಾಗಿ ಇವರು ಕೆಲಸ ಮಾಡುತಿದ್ದರು. ಸೋಮವಾರ ಬೆಳಿಗ್ಗೆ ಏಳು ಗಂಟೆಯ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರ್ತಿನಿ ಎಂದು ತಿಳಿಸಿ ಮನೆ ಬಿಟ್ಟು ಹೋಗಿದ್ದರು.
ಯುವತಿಯ ಕೈವಾಡ ಶಂಕೆ: ಚಾಲಕನ ಸಾವಿನ ಹಿಂದೆ ಯುವತಿಯೊಬ್ಬಳ ಕೈವಾಡವಿದೆ ಎನ್ನಲಾಗ್ತಿದೆ. ಕೆಂಗೇರಿಯ ಲಾಡ್ಜ್ಗೆ ಯುವತಿಯೊಂದಿಗೆ ಪುಟ್ಟೆಗೌಡ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ಯುವತಿ ಡೋರ್ ಲಾಕ್ ಮಾಡಿ ಹೊರಹೋಗಿದ್ದಾಳಂತೆ. ಹಣ ಬಾಕಿ ಇರುವ ಕಾರಣ ರೂಂ ಒಳಗೆ ಸಿಬ್ಬಂದಿ ಹೋದಾಗ ಪುಟ್ಟೆಗೌಡರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ. ಆದರೆ ಪುಟ್ಟೇಗೌಡೊಂದಿಗೆ ಲಾಡ್ಜ್ಗೆ ಬಂದ ಯುವತಿ ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಂಬಂಧಿಕರಿಂದ ಕೊಲೆ ಆರೋಪ: ಇದು ಕೊಲೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಪುಟ್ಟೇಗೌಡ ಹಣೆಯ ಮೇಲೆ ಗಾಯದ ಗುರುತುಗಳಿವೆ. ಹೀಗಾಗಿ ಇದು ಕೊಲೆಯಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕೆಂಗೇರಿ ಪೊಲೀಸರು ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆ ಅಥವಾ ಆತ್ಮಹತ್ಯೆ ಎನ್ನುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಯುವತಿ ಲಾಡ್ಜ್ನಿಂದ ತೆರಳಿದ ಬಳಿಕ ಘಟನೆ ನಡೆದಿರುವುದರಿಂದ ಸಾಕಷ್ಟು ಅನುಮಾನ ಮೂಡಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಅಸಲಿ ಸಂಗತಿ ತಿಳಿದುಬರಲಿದೆ.
ಇದನ್ನೂ ಓದಿ: ಕೊಲ್ಯ - ಅಡ್ಕ ರಸ್ತೆ ಅಪಘಾತ: ಸಹೋದರರಿಬ್ಬರು ಸಾವು, ಇಬ್ಬರಿಗೆ ಗಾಯ
ಬೆದರಿಕೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ: ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಬಂದ ಬೆದರಿಕೆಗೆ ಹೆದರಿ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಧರ್ಮಸ್ಥಳದ ಅಶೋಕ್ ನಗರದಲ್ಲಿ ನಡೆದಿದೆ. ಬೆಳ್ತಂಗಡಿಯ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಬಿಕಾಂ ಪದವಿ ಪಡೆಯುತ್ತಿದ್ದ ಹರ್ಷಿತ್ (19) ಪ್ರಾಣ ಕಳೆದುಕೊಂಡವರು. ಸುಮಾರು 15 ದಿನಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಓರ್ವ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಬಂದು ಚಾಟಿಂಗ್ ಮಾಡಿ, ಮೊಬೈಲ್ಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ಬಳಿಕ ನಿನ್ನ ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ ಎಂದು 11 ಸಾವಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಹೆದರಿ ವಿದ್ಯಾರ್ಥಿ ಜ.24 ಮಧ್ಯಾಹ್ನ ನಂತರ ಇಲಿ ಪಾಷಾಣ ಸೇವಿಸಿದ್ದರು.
ಬಳಿಕ ಅಸ್ವಸ್ಥಗೊಂಡ ವಿದ್ಯಾರ್ಥಿಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಂತರ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸ್ವಿಮ್ಮಿಂಗ್ ಫೂಲ್ನಲ್ಲಿ ಈಜಲು ತೆರಳಿ ಬಾಲಕರಿಬ್ಬರು ನೀರುಪಾಲು