ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಮೇಲ್ಸೇತುವೆ ಮೇಲೆ ನಡೆದಿದೆ. ಬಸ್ ಚಕ್ರ ಹರಿದ ಪರಿಣಾಮ ಸೀಮಾ (21) ಸ್ಥಳದಲ್ಲೇ ಸಾವನ್ನಪ್ಪಿದರೆ, ಒಂದೂವರೆ ವರ್ಷದ ಹೆಣ್ಣು ಮಗು ಮತ್ತು ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯವರಾದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತಳ ಪತಿ ಗುರುಮೂರ್ತಿ ಸಿಂಗಸಂದ್ರದ ಬೆಸ್ಕಾಂ ಘಟಕದಲ್ಲಿ 8 ವರ್ಷದಿಂದ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಸಂಜೆ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಬಸ್ ಡಿಕ್ಕಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ದಂಪತಿ ನೆಲಕ್ಕೆ ಬಿದ್ದಾಗ ಸೀಮಾ ಅವರ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಚಾಲಕ ಹಾಗೂ ನಿರ್ವಾಹಕರಿಬ್ಬರೂ ಬಸ್ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿರುವುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೈಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿ ಸಾವು: ಬಿಎಂಟಿಸಿ ಬಸ್ ಹರಿದು ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ್ದ ಘಟನೆ ಅಕ್ಟೋಬರ್ ತಿಂಗಳಲ್ಲಿ ಯಶವಂತಪುರದ ಗಾರೆನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಬಳಿ ನಡೆದಿತ್ತು. 21 ವರ್ಷದ ಗಂಗಾಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ.
ನಗರದ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗಂಗಾಧರ್ ಎಚ್ಎಎಲ್ನಲ್ಲಿ ಇಂಟರ್ನ್ಶಿಪ್ಗೆಂದು ಸರ್ಟಿಫಿಕೇಟ್ ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ನಡೆದಿತ್ತು. ಬಿಎಂಟಿಸಿ ಬಸ್ ಹಿಂಬದಿ ಚಕ್ರ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಗಂಗಾಧರ್ ನೆಲಕ್ಕೆ ಬಿದ್ದಿದ್ದ, ಅದೇ ವೇಳೆ ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಆತನ ಮೇಲೆ ಹರಿದು, ಗಂಗಾಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನಾ ಸ್ಥಳಕ್ಕೆ ಯಶವಂತಪುರ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರು ಸುಟ್ಟು ಕರಕಲು: ವಿಡಿಯೋ