ಕೆಆರ್‌ಪುರಂ(ಬೆಂಗಳೂರು): ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರ ಸೂಚನೆ ಮೇರೆಗೆ ಎ ನಾರಾಯಣಪುರ ಮತ್ತು ವಿಜ್ಞಾನನಗರ ವಾರ್ಡ್ಗಳಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಆರೋಗ್ಯ ಭಾರತಿ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಳೆದ ಎರಡು ತಿಂಗಳ ಕಾಲ ಕೆಆರ್‌ಪುರಂದ ಏಳು ವಾರ್ಡ್ನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಂದು ಉಳಿದ ಎರಡು ವಾರ್ಡ್ಗಳಲ್ಲಿ ನಡೆಸಲಾಯಿತು. ಎ.ನಾರಯನಪುರ ಮತ್ತು ವಿಜ್ಞಾನನಗರ ವಾರ್ಡ್ನ ಒಂದು ಸಾವಿರಕ್ಕೂ ಹೆಚ್ಚು ಜನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ರಾಷ್ಟ್ರೋತ್ಥಾನ ರಕ್ತ ಭಂಡಾರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ರಕ್ತ ಪರೀಕ್ಷಿಸಿ, ನಂತರ ರಕ್ತ ಸಂಗ್ರಹಿಸಿದರು.
ಈ ವೇಳೆ ಕೆಆರ್‌ಪುರಂ ಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಕೊರತೆ ತಪ್ಪಿಸಲು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ದಾನಗಳಲ್ಲಿ ರಕ್ತದಾನ ಶ್ರೇಷ್ಠ. ಪ್ರತಿಯೊಬ್ಬರೂ ರಕ್ತದಾನಕ್ಕೆ ಮುಂದಾಗಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಹಯೋಗದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ನೂರಾರು ಯುವಕರು ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ. ಕೆಲವರು ತಪ್ಪು ಕಲ್ಪನೆ ಹಾಗೂ ಮತ್ತಿತರರ ಕಾರಣಗಳಿಂದ ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ 3 ಬಾರಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು. ಶಿಬಿರದಲ್ಲಿ ಪಾಲ್ಗೊಂಡ ದಾನಿಗಳಿಗೆ ಮಾಜಿ ಪಾಲಿಕೆ ಸದಸ್ಯ ಎಸ್ ಡಿ ನಾಗರಾಜ್ ಹಾಗೂ ಮಾಜಿ ಪಾಲಿಕೆ ಸದಸ್ಯ ಸುರೇಶ್, ಬಿಜೆಪಿ ರಾಜ್ಯ ಮಹಿಳಾ ಅಧ್ಯಕ್ಷೆ ಗೀತಾ ವಿವೇಕಾನಂದ, ಉತ್ತರ ಜಿಲ್ಲಾ ಉಪಾಧ್ಯಕ್ಷ ಮುನೇಗೌಡ ಅವರು ಪ್ರಮಾಣ ಪತ್ರ ಹಾಗೂ ಹಣ್ಣಿನ ಜ್ಯೂಸ್ ವಿತರಿಸಿದರು.