ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 11 ಪುಣ್ಯಸ್ಮರಣೆಯನ್ನು ಅಭಿಮಾನಿಗಳು, ರಕ್ತದಾನ ಶಿಬಿರ ಹಾಗೂ ಅನ್ನದಾನ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಆದರೆ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ವಿಷ್ಣು ದಾದ ಅಜರಾಮರವಾಗಿ ಉಳಿದಿದ್ದಾರೆ. ವಿಷ್ಣು ದಾದ ನಮ್ಮನ್ನು ಆಗಲಿ ಇಂದಿಗೆ 11 ವರ್ಷಗಳಾಗಿದ್ದು, ಅವರ ಪುಣ್ಯಸ್ಮರಣೆಯನ್ನು ವಿವಿಧೆಡೆ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಕೆಂಗೇರಿ ಹತ್ತಿರವಿರುವ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳು ಹೂವಿನ ಅಲಂಕಾರ ಮಾಡಿ ಶ್ರದ್ಧೆಯಿಂದ ನಟನ ಪುಣ್ಯಸ್ಮರಣೆ ಆಚರಿಸಿದ್ದಾರೆ. ಅತ್ತ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಮತ್ತು ಅವರ ಕುಟುಂಬದವರು ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ.