ಬೆಂಗಳೂರು: "ನೀನು ನಿನ್ನನ್ನು ಸಾಕಿದ ತಂದೆ ತಾಯಿಗೆ ಏನು ಮಾಡುತ್ತಿರುವೆಯೋ ಅದನ್ನೇ ಮುಂದೆ ಯಾವತ್ತೋ ನಿನ್ನ ಮಕ್ಕಳು ನಿನಗೆ ಮಾಡಬಹುದು". ಈ ಮಾತನ್ನು ಹೇಳಿರುವುದು ಬೇರೆ ಯಾರೂ ಅಲ್ಲ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಹಾಗೂ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ. ತಮ್ಮ ಮಗಳು ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ಟಿ.ಎಲ್.ನಾಗರಾಜು ಎಂಬುವರು ಹೇಬಿಯಸ್ ಕಾರ್ಪಸ್ ಅರ್ಜಿಯೊಂದನ್ನು ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇಂಥದ್ದೊಂದು ಹಿತವಚನವನ್ನು ಅರ್ಜಿದಾರರ ಮಗಳಿಗೆ ಹೇಳಿದೆ. ಅರ್ಜಿದಾರ ನಾಗರಾಜು ಅವರ ಮಗಳು ನಿಸರ್ಗ ಎಂಜನಿಯರ್ ವಿದ್ಯಾರ್ಥಿನಿಯಾಗಿದ್ದು, ಕಾಣೆಯಾಗಿದ್ದರು. ವೃತ್ತಿಯಲ್ಲಿ ಡ್ರೈವರ್ ಆಗಿರುವ ನಿಖಿಲ್ ಎಂಬಾತ ತಮ್ಮ ಮಗಳನ್ನು ಬಲವಂತವಾಗಿ ಅಪಹರಿಸಿದ್ದಾನೆ, ತಮ್ಮ ಮಗಳನ್ನು ಹುಡುಕಿ ಕೊಡುವಂತೆ ನಾಗರಾಜು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಸರ್ಗ ಹಾಗೂ ಆಕೆಯ ಪ್ರಿಯಕರ ನಿಖಿಲ್ ಇಬ್ಬರನ್ನು ಮಂಗಳವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ನಲ್ಲಿ ಮೇಲ್ಮನವಿಯೂ ವಜಾ: ಶಾಸಕ ಎನ್.ಮಹೇಶ್ ಬಣದ 7 ನಗರಸಭಾ ಸದಸ್ಯರು ಅನರ್ಹ
ಹೈಕೋರ್ಟ್ ಮುಂದೆ ಹಾಜರಾದ ಯುವತಿ ನಿಸರ್ಗ, ತಾನು ಪ್ರೌಢ ವಯಸ್ಕಳಾಗಿದ್ದು, ತನ್ನಿಷ್ಟದಂತೆ ಪ್ರಿಯಕರ ನಿಖಿಲ್ ಜೊತೆ ಇರುವುದಾಗಿ ತಿಳಿಸಿದರು. ಕಳೆದ ಮೇ.13 ರಂದೇ ತಾವಿಬ್ಬರೂ ವಿವಾಹವಾಗಿದ್ದು, ಅಂದಿನಿಂದ ಜೊತೆಯಾಗಿ ಇರುವುದಾಗಿಯೂ ಹೇಳಿದರು. ಅರ್ಜಿದಾರ ಹಾಗೂ ಅವರ ಪುತ್ರಿಯ ವಾದ ವಿವಾದ ಆಲಿಸಿದ ನ್ಯಾಯಾಲಯ, "ಪಾಲಕರಿಗಾಗಿ ತ್ಯಾಗ ಮಾಡಿದ ಮಕ್ಕಳು ಹಾಗೂ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಪಾಲಕರನ್ನು ನೋಡಿದ್ದೇವೆ. ಇಬ್ಬರ ಮಧ್ಯೆ ಪ್ರೀತಿ ವಿಶ್ವಾಸಗಳಿದ್ದರೆ ಇಂಥ ಘಟನೆಗಳು ನಡೆಯುವುದಿಲ್ಲ" ಎಂದು ಹೇಳಿತು.
"ಇಂದಿನ ಈ ಪ್ರಕರಣವನ್ನು ನೋಡಿದರೆ ಪ್ರೀತಿ ಎಂಬುದು ಪಾಲಕರ ಪ್ರೀತಿಗಿಂತ ದೊಡ್ಡದಾಗಿದೆ ಎನಿಸುತ್ತದೆ. ಆದರೆ ಇಂದು ಇವರು ತಮ್ಮ ಪಾಲಕರಿಗೆ ಮಾಡುತ್ತಿರುವುದನ್ನು ಮುಂದೊಂದು ದಿನ ಮರಳಿ ಪಡೆಯುತ್ತಾರೆ." ಎಂದು ನ್ಯಾಯಾಲಯ ಎಚ್ಚರಿಕೆಯ ಸಂದೇಶ ರವಾನಿಸಿತು. ಇಷ್ಟು ಹಿತವಚನ ಹೇಳಿದ ನ್ಯಾಯಮೂರ್ತಿಗಳು ಯುವತಿಯು ತನ್ನ ಪತಿಯೊಂದಿಗೆ ಇರಲು ಅನುಮತಿ ನೀಡಿದರು. ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದರು.