ಬೆಂಗಳೂರು: ಸಿದ್ದರಾಮಯ್ಯ ಅವರು ಸಿದ್ದರಾಮುಲ್ಲಾ ಖಾನ್ ಆದರೆ, ಯಡಿಯೂರಪ್ಪ ಮತ್ತೆ ಜಗದೀಶ್ ಶೆಟ್ಟರ್ ಯಾವ ಖಾನ್..? ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗೆ ಸಿದ್ದರಾಮುಲ್ಲಾ ಖಾನ್ ಎಂದು ಕರೆದಿದ್ದ ಮಾಜಿ ಸಚಿವ ಸಿಟಿ ರವಿಗೆ ತೀರುಗೇಟು ನೀಡಿರುವ ಬಿ ಕೆ ಹರಿಪ್ರಸಾದ್, ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಯಾವ ಖಾನ್..? ಇವರು ಕೂಡ ತಲೆ ಮೇಲೆ ಟಿಪ್ಪು ಪೇಟ ಹಾಕಿಕೊಂಡಿದ್ದರಲ್ಲ. ಹಾಗಾದ್ರೆ ಇವರು ಯಾವ ಖಾನ್? ಯಡಿಯೂರಪ್ಪ ಏನು ಯೂಸುಫ್ ಖಾನ್ ಅಲ್ವಾ. ಜಗದೀಶ್ ಶೆಟ್ಟರ್ ಯಾವ ಖಾನ್..? ಎಂದು ಬಿಜೆಪಿ ನಾಯಕರನ್ನು ಖಾನ್ ಎಂದು ಸಂಬೋಧಿಸಿ ಬಿ ಕೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯಗೆ ನಾಮಕರಣ ಮಾಡಲು ಇವರು ಯಾರು?: ಸಿಟಿ ರವಿ ಅವರು ಮೊದಲು ಅವರು ಯಾರು ಅಂತಾ ತಿಳಿದುಕೊಳ್ಳಲಿ. ಮೋದಿ, ಸಿದ್ದರಾಮಯ್ಯ ಅವರಿಗೆ ಏನೋ ಒಂದು ಹೇಳಿದ್ರು. ಅದೇ ರೀತಿ ಅವರ ಚೇಲಾಗಳು ಮಾಡ್ತಿದ್ದಾರೆ. ಈ ಬಾರಿ ಚುನಾವಣೆ ನಡೆದರೆ ಬಿಜೆಪಿ ಬಾಗಿಲು ಮುಚ್ಚಿರುತ್ತದೆ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯಗೆ ಅವರ ತಂದೆ ತಾಯಿ ಹೆಸರು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯಗೆ ನಾಮಕರಣ ಮಾಡೋಕೆ ಸಿಟಿ ರವಿ ಯಾರು.? ಫಸ್ಟ್ ಇವರ ಹೆಸರು ಏನು ಅನ್ನೊದು ತಿಳಿದುಕೊಳ್ಳಬೇಕು. ಚಿಕ್ಕಮಗಳೂರಿನಲ್ಲಿ ಇವರು ಏನು ಅನ್ನೊದು ಎಲ್ಲರಿಗೂ ಗೊತ್ತಿದೆ ಎಂದು ಟಾಂಗ್ ನೀಡಿದರು.
ಸಮಸ್ಯೆಗಳು ಇದ್ದರೆ ಅದರ ಬಗ್ಗೆ ಚರ್ಚೆ ಮಾಡಬೇಕೇ ಹೊರತು ಹೆಸರುಗಳನ್ನು ಬೇರೆ ಬೇರೆ ಇಡುವುದು ತಪ್ಪು. ಬೇರೆಯವರಿಗೆ ಹೆಸರಿಡೋದು ಬಿಜೆಪಿ ಸಂಪ್ರದಾಯ. ಹಿಂದೆ ಪ್ರಧಾನಿ ಮೋದಿ ಬಂದಾಗ ಸಿದ್ದರಾಮಯ್ಯ ಒಂದು ಟೈಟಲ್ ಕೊಟ್ಟಿದ್ರು. ಈ ಕೆಲಸವನ್ನು ಈಗ ಅವರ ಬೆಂಬಲಿಗರು ಮಾಡ್ತಿದ್ದಾರೆ ಎಂದು ಗರಂ ಆದರು.
ವಿಷಯ ಡೈವರ್ಟ್ ಮಾಡಲು ಗಡಿ ವಿಚಾರ: ಕರ್ನಾಟಕ, ಮಹಾರಾಷ್ಟ್ರ ಗಡಿ ವಿಚಾರವಾಗಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ರಾಜ್ಯ ಸರ್ಕಾರದ ವಿರುದ್ಧ ಹಲವಾರು ಆರೋಪಗಳಿವೆ. ಈ ಆರೋಪಗಳನ್ನು ಡೈವರ್ಟ್ ಮಾಡುವುದಕ್ಕೆ ಗಡಿ ವಿಚಾರ ತೆಗೆಯುತ್ತಿದ್ದಾರೆ. ಗಡಿ ವಿಚಾರಕ್ಕೆ ಸರ್ಕಾರದ ಕುಮ್ಮಕ್ಕಿದೆ. ಜನರ ಮನಸ್ಥಿತಿಯನ್ನ ಬೇರೆ ಕಡೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಇದು ಡಬಲ್ ಎಂಜಿನ್ ಸರ್ಕಾರ ಅಲ್ಲ. ತ್ರಿಬಲ್ ಎಂಜಿನ್ ಸರ್ಕಾರ. ಇಲ್ಲೂ ಬಿಜೆಪಿ ಸರ್ಕಾರ ಇದೆ ಎಂದು ಕಿಚಾಯಿಸಿದರು.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರ್ತಿವಿ ಎಂದು ಧಮ್ಕಿ ಹಾಕಿರುವ ವಿಚಾರದ ಬಗ್ಗೆ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್, ಕಳೆದ ಬಾರಿ ಬೆಳಗಾವಿ ಅಧಿವೇಶನ ಸಮಯದಲ್ಲಿ ಮಹಾರಾಷ್ಟ್ರ ಹೋಮ್ ಮಿನಿಸ್ಟರ್ ಬಂದು ಇಲ್ಲೇ ಉಳಿದುಕೊಂಡಿದ್ದರು. ಇದು ನಮ್ಮ ಹೋಮ್ ಮಿನಿಸ್ಟರ್ಗೆ ಗೊತ್ತೇ ಇರಲಿಲ್ಲ. ನಾನೇ ಈ ವಿಚಾರ ನಮ್ಮ ರಾಜ್ಯದ ಗೃಹ ಸಚಿವರಿಗೆ ತಿಳಿಸಿದ್ದೆ. ನಮ್ಮ ಹೋಮ್ ಮಿನಿಸ್ಟರ್ಗೆ ಅವರ ಇಲಾಖೆ ಬಿಟ್ಟು ಬೇರೆ ಎಲ್ಲಾ ವಿಚಾರಗಳು ಗೊತ್ತಿದೆ ಎಂದು ಹರಿ ಪ್ರಸಾದ್ ಟೀಕೆ ಮಾಡಿದರು.
ಇದನ್ನೂ ಓದಿ: ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ: ಬೆಳಗಾವಿ ಡಿಸಿ ನಿತೇಶ್