ಬೆಂಗಳೂರು : ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಹಿರಿಯ ಕಾಂಗ್ರೆಸ್ಸಿಗ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ಜನವರಿ 5 ಕ್ಕೆ ಸದಸ್ಯತ್ವ ಪೂರ್ಣಗೊಳಿಸಿದ್ದ ಎಸ್ ಆರ್ ಪಾಟೀಲರಿಂದ ತೆರವಾಗಿದ್ದ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಸ್ಥಾನಕ್ಕೆ ಇದೀಗ ಬಿ ಕೆ ಹರಿಪ್ರಸಾದ್ ಹೆಸರು ಘೋಷಣೆಯಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಈ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಇವರು ಸೇರಿದಂತೆ ಇನ್ನೂ ಎರಡ್ಮೂರು ಹೆಸರುಗಳು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕೇಳಿಬಂದಿದ್ದವು. ಆದರೆ ವರ್ಷದ ಹಿಂದೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡ ಸಮಯದಿಂದಲೂ ಬಿ ಕೆ ಹರಿಪ್ರಸಾದ್ ಹೆಸರು ಮಾತ್ರ ನಿರಂತರವಾಗಿ ಕೇಳಿಬಂದಿತ್ತು. ಕಳೆದ ಡಿಸೆಂಬರ್ನಲ್ಲಿ ನಡೆದ ಬೆಳಗಾವಿ ಅಧಿವೇಶನ ಸಂದರ್ಭ ದಿಢೀರ್ ಆಗಿ ಈ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ಹೆಸರು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಹೈಕಮಾಂಡ್ ತನ್ನ ನಿರ್ಧಾರವನ್ನು ಇಂದು ಆದೇಶದ ರೂಪದಲ್ಲಿ ಪ್ರಕಟಿಸಿದೆ.
ಇತರೆ ಸ್ಥಾನಗಳ ಘೋಷಣೆ : ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅದುವರೆಗೂ ಪ್ರತಿಪಕ್ಷ ನಾಯಕರಾಗಿದ್ದ ಎಸ್ ಆರ್ ಪಾಟೀಲ್, ಕಾಂಗ್ರೆಸ್ ಸಚೇತಕರಾಗಿದ್ದ ಎನ್ ನಾರಾಯಣಸ್ವಾಮಿ ಸ್ಪರ್ಧೆ ಮಾಡಿರಲಿಲ್ಲ. ಇವರಿಂದ ತೆರವಾಗಿರುವ ಸ್ಥಾನಗಳಿಗೆ ಹೈಕಮಾಂಡ್ ಇಂದು ನೂತನ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಪ್ರತಿಪಕ್ಷ ನಾಯಕರಾಗಿ ಬಿ ಕೆ ಹರಿಪ್ರಸಾದ್ ಹೆಸರು ಘೋಷಣೆಯಾದರೆ, ಪ್ರತಿಪಕ್ಷದ ಉಪನಾಯಕರಾಗಿ ಕೆ.ಗೋವಿಂದರಾಜು, ಕಾಂಗ್ರೆಸ್ ಪಕ್ಷದ ಸಚೇತಕರಾಗಿ ಪ್ರಕಾಶ್ ರಾಥೋಡ್ ನೇಮಕಗೊಂಡಿದ್ದಾರೆ.

ಸಿದ್ದರಾಮಯ್ಯ ಆಪ್ತರಿಗೆ ಮಣೆ : ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಗೋವಿಂದರಾಜು ಹಾಗೂ ಪ್ರಕಾಶ್ ರಾಥೋಡ್ ಅವರಿಗೆ ಅವಕಾಶ ಸಿಕ್ಕಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಸಚೇತಕರಾಗಿದ್ದ ಎಂ ನಾರಾಯಣಸ್ವಾಮಿ ಸಹ ಸಿದ್ದರಾಮಯ್ಯ ಬಣದಲ್ಲೇ ಗುರುತಿಸಿಕೊಂಡಿದ್ದರು. ಇನ್ನೊಂದೆಡೆ ಬಿ ಕೆ ಹರಿಪ್ರಸಾದ್ ತಮ್ಮ ಹೈಕಮಾಂಡ್ ಸಂಪರ್ಕವನ್ನು ಸದ್ಬಳಕೆ ಮಾಡಿಕೊಂಡು ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ