ಬೆಂಗಳೂರು: ಪಕ್ಷದ ಬದ್ಧತೆಯ ಕಾರ್ಯಕರ್ತರು ಮತ್ತು ಮುಖಂಡರ ನೆರವಿನಿಂದ ಬಿಜೆಪಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲಿದೆ. ಉತ್ತರದ ಖಾನಾಪುರ ಮತ್ತು ದಕ್ಷಿಣದ ರಾಮನಗರದಲ್ಲಿ ಜನತೆಯೂ ಬಿಜೆಪಿ ಅಧಿಕಾರ ಪಡೆಯಲು ನೆರವಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ರಾಮನಗರ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆ ಖಾನಾಪುರದ ಪ್ರಮುಖ ಮುಖಂಡರು ಇಂದು ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆ ಕಾರ್ಯ ಪ್ರಾರಂಭವಾಗಿದೆ. ಬಿಜೆಪಿ ಆಳವಾಗಿ ಬೇರೂರಿ ಶಕ್ತಿ ಪಡೆದಿರದ ಪ್ರದೇಶಗಳಲ್ಲಿ ಪಕ್ಷವು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಯಲಿದೆ ಎಂದು ನುಡಿದರು.
ರಾಜ್ಯದ ರಾಜಕೀಯದಲ್ಲಿ ಇಂದು ಅತ್ಯಂತ ಮಹತ್ವದ ದಿನ. ರಾಜಕಾರಣ ನಿಂತ ನೀರಲ್ಲ ಎಂಬ ಮಾತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನೆಲೆಯಾಗಿದ್ದ ಜಿಲ್ಲೆಗಳಲ್ಲಿ ಇಂದು ದೊಡ್ಡ ಬದಲಾವಣೆ ಆಗುತ್ತಿದೆ. ಬರುವಂತಹ ದಿನಗಳಲ್ಲಿ ಎಲ್ಲ ಕಡೆ ಬಿಜೆಪಿಯ ಕಮಲ ಅರಳಲಿದೆ. ಬಿಜೆಪಿ ಪರವಾದ ಈ ಅಲೆಯು ದೊಡ್ಡ ಶಕ್ತಿಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಫೆ.23ರವರೆಗೆ ಕರ್ಫ್ಯೂ ಘೋಷಣೆ
ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕರಾದ ಅರವಿಂದ ಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು. ರಾಮನಗರ ಜಿಲ್ಲೆಯ ಮುಖಂಡರು ಹಾಗೂ ಬಮುಲ್ ಮಾಜಿ ನಿರ್ದೇಶಕರಾದ ಲಿಂಗೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹೆಚ್.ಎನ್.ಅಣ್ಣಯ್ಯ, ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿಲಿಂಗೇಗೌಡರ ಮಕ್ಕಳಾದ ಗೌತಮ್, ಡಾ. ವಿವೇಕಾನಂದ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಸಾದ್ ಗೌಡ (ಮಾಗಡಿ), ನಗರಸಭಾ ಮಾಜಿ ಸದಸ್ಯರಾದ ಕೃಷ್ಣೇಗೌಡ, ಗೋಪಾಲಕೃಷ್ಣ ಹಲವು ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರಿದರು.