ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಡಕ್ಕೆ ಮಣಿದಿರುವ ಬಿಜೆಪಿ ಹೈಕಮಾಂಡ್ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಪಕ್ಷ ತಮಗೆ ಟಿಕೆಟ್ ನೀಡಲಿದೆ ಎಂದು ಅತೀವ ಆತ್ಮವಿಶ್ವಾಸದಿಂದ ಇದ್ದ ಲಕ್ಷ್ಮಣ ಸವದಿ, ಪಕ್ಷದ ಹೈಕಮಾಂಡ್ ಧೋರಣೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಥಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸವದಿ ಅವರಿಗೆ ಬಿಜೆಪಿ ಟಿಕೆಟ್ ದೊರೆಯುತ್ತದೆ ಎಂದು ಭಾವಿಸಲಾಗಿತ್ತು. ಕೊನೆ ಕ್ಷಣದ ವರೆಗೂ ಸರ್ವ ರೀತಿ ಪ್ರಯತ್ನ ನಡೆಸಿದ್ದರು. ಆದರೆ, ಅಂತಿಮವಾಗಿ ಪಕ್ಷ ಟಿಕೆಟ್ ನೀಡುವ ಧೈರ್ಯ ತೋರದಿರುವ ಬಗ್ಗೆ ಸವದಿ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಯವರ ಬೆಂಬಲಿಗರಾದ ಶಾಸಕ ಮಹೇಶ್ ಕುಮ್ಟಳ್ಳಿ ಅವರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದಾರೆ. ಈ ಮೊದಲು ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ದೊರೆಯುವುದು ಅನುಮಾನವೆಂದು ಹೇಳಲಾಗಿತ್ತು. ಮಹೇಶ್ ಕುಮಟಳ್ಳಿ ಬದಲಿಗೆ ಸವದಿಯವರಿಗೇ ಟಿಕೆಟ್ ನೀಡಲಾಗುತ್ತದೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಡಿತ್ತು.
ಆದರೆ, ತಮ್ಮ ಕಟ್ಟಾ ಬೆಂಬಲಿಗ ಮಹೇಶ ಕುಮಟಳ್ಳಿ ಅವರಿಗೆ ದೊರೆಯುವುದು ಅನುಮಾನವೆಂದು ಗಮನಕ್ಕೆ ಬಂದಾಗ ರಮೇಶ್ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಸರ್ಕಾರ ರಚಿಸಲು ಅನುಕೂಲವಾಗುವಂತೆ ಕಾಂಗ್ರೆಸ್ ತೊರೆದು ತಮ್ಮ ಜತೆ ಬಿಜೆಪಿ ಸೇರಿದ ಮಹೇಶ್ ಕಮಟಳ್ಳಿ ಅವರಿಗೆ ಟಿಕೆಟ್ ನೀಡದಿದ್ದರೆ ತಾವು ಸಹ ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ರಮೇಶ ಜಾರಕಿಹೊಳಿ ಘೋಷಿಸಿ ಎಚ್ಚರಿಕೆಯ ಸಂದೇಶ ಬಿಜೆಪಿ ಹೈಕಮಾಂಡ್ಗೆ ರವಾನಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ವರಿಷ್ಠರು ಈ ಬಗ್ಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಲಕ್ಷ್ಮಣ ಸವದಿ ಅವರಿಗೆ ಅಥಣಿಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನಿರಾಕರಿಸಿ, ಕಾಂಗ್ರೆಸ್ ಪಕ್ಷ ತೊರೆದು ಬಂದಿದ್ದ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಪ್ರಕಟಿಸಿದೆ. ಕ್ಷೇತ್ರದಿಂದ ಸ್ಪರ್ಧೆ ಮಾಡಲು ತಮಗೆ ಟಿಕೆಟ್ ನೀಡಲೇಬೇಕೆಂದು ಪಟ್ಟು ಹಿಡಿದಿದ್ದ ಸವದಿ ಒಂದೊಮ್ಮೆ ಪಕ್ಷ ಟಿಕೆಟ್ ನೀಡದಿದ್ದರೆ ಕ್ಷೇತ್ರದ ಮತದಾರರ ಅಭಿಪ್ರಾಯವನ್ನಾಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಜೊತೆಗೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ದಟ್ಟವಾದ ಸುದ್ದಿ ಹರಡಿದೆ.
ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪಕ್ಷದ ಮುಖಂಡರು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಈ ಬೆಳವಣಿಗೆ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ತಮ್ಮ ಅಪ್ತರ ಮೂಲಕ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಟಿಕೆಟ್ ಕೈತಪ್ಪಿದ್ದರಿಂದ ಲಕ್ಷ್ಮಣ ಸವದಿಯವರ ನಡೆ ಈಗ ನಿಗೂಢವಾಗಿದೆ.
ಇದನ್ನೂಓದಿ:ಆನಂದ್ ಸಿಂಗ್, ಯಡಿಯೂರಪ್ಪ ಪುತ್ರರಿಗೆ ಬಿಜೆಪಿ ಟಿಕೆಟ್ ಘೋಷಣೆ