ಬೆಂಗಳೂರು: "ಈ ಹಿಂದೆ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುಗುವುದು ಅಂತಾ ಜನರು ಮಾತಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಅಶೋಕ್ ಗುಡುಗಿದರೆ ವಿಧಾನಸಭೆ ನಡುಗಬೇಕು ಆ ರೀತಿಯಲ್ಲಿ ಅಶೋಕ್ ಸದನದಲ್ಲಿ ಹೋರಾಟ ಮಾಡುತ್ತಾರೆ, ಮಾತನಾಡುತ್ತಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಶೋಕ್ ಅವರನ್ನ ವಿಪಕ್ಷ ನಾಯಕರನ್ನಾಗಿ ಘೋಷಣೆ ಮಾಡಲಾಗಿದೆ. ಏಳು ಬಾರಿ ಶಾಸಕರಾಗಿ, ಡಿಸಿಎಂ ಆಗಿ, ಹಲವು ಖಾತೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಹಿರಿಯರ ಅಪೇಕ್ಷೆಯಂತೆ ಮೋದಿ ಅವರು, ನಡ್ಡಾ, ಅಮಿತ್ ಶಾ ಅವರು ಬಿಜೆಪಿ ಮುನ್ನಡೆಸಿಕೊಂಡು ಹೋಗುವಂತೆ ಜವಾಬ್ದಾರಿ ನೀಡಿದ್ದಾರೆ. ಕಳೆದ ಆರು ತಿಂಗಳಿಂದ ಆಡಳಿತ ಪಕ್ಷ ಕಾಂಗ್ರೆಸ್ ವಿಪಕ್ಷ ನಾಯಕರಿಲ್ಲ, ರಾಜ್ಯಾಧ್ಯಕ್ಷ ಇಲ್ಲ ಅಂತ ಟೀಕೆಮಾಡುತ್ತಿದ್ದರು. ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನ ದಿಂದ ನನ್ನ, ಅಶೋಕ್ ಅವರನ್ನ ಆಯ್ಕೆ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹೇಗಾಗಿದೆ ಅಂದರೆ ನಮ್ಮ ಆಯ್ಕೆಯಿಂದ ಕಂಗೆಟ್ಟಿದ್ದಾರೆ, ಯಾಕಾದರೂ ನಾವು ಬಿಜೆಪಿಯನ್ನು ಟೀಕಿಸಿದೆವೋ ಎಂದು ಕೊಳ್ಳುತ್ತಿದ್ದಾರೆ" ಎಂದರು.
ನಾನು, ವಿಜಯೇಂದ್ರ ಜೋಡೆತ್ತಾಗಿ ದುಡಿಯುತ್ತೇವೆ: ವಿಪಕ್ಷ ನಾಯಕ ಅಶೋಕ್ ಮಾತನಾಡಿ, "ನನ್ನೆಲ್ಲಾ ಪ್ರೀತಿಯ ಕಾರ್ಯಕರ್ತರೆ. ಹೊಸದಾಗಿ ಕರ್ನಾಟಕದಲ್ಲಿ ಯುವಕರಿಗೆ ಅವಕಾಶ ನೀಡುವ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಕೇಂದ್ರದ ನಾಯಕರು, ಕಾರ್ಯಕರ್ತರು ಎಲ್ಲರೂ ಸೇರಿ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಅವರಿಗೆ ನಡುಕ ಶುರುವಾಗಿದೆ. ಇಷ್ಟು ದಿನ ಅಧ್ಯಕ್ಷ, ವಿಪಕ್ಷ ನಾಯಕ ಇಲ್ಲ ಅಂತಿದ್ದರು, ವಿಜಯೇಂದ್ರ ಅಧ್ಯಕ್ಷ ಆಗ್ತಿದ್ದಂತೆ ನಡುಕ ಶುರುವಾಗಿದೆ. ಇನ್ನಷ್ಟು ದಿನ ಮಾತಾಡದಿದ್ರೆ ಆರಾಮಾಗಿರ್ತಿದ್ದೆವು ಅನ್ನೋ ಪರಿಸ್ಥಿತಿ ಬಂದಿದೆ. ನಾನು, ವಿಜಯೇಂದ್ರ ಜೋಡೆತ್ತಾಗಿ ದುಡಿಯುತ್ತೇವೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ತರಹ ಮಾಡಲ್ಲ. ಸಮರ್ಥವಾಗಿ ರಾಜ್ಯದ ಜನರ ಸಮಸ್ಯೆ ಆಲಿಸುತ್ತೇವೆ" ಎಂದು ಹೇಳಿದರು.
ಬಿಜೆಪಿ ಕಚೇರಿಗೆ ಬಂದ ಅಶೋಕ್‌ಗೆ ಅದ್ಧೂರಿ ಸ್ವಾಗತ: ಇದಕ್ಕೂ ಮುನ್ನ, ಪ್ರತಿಪಕ್ಷ ನಾಯಕರಾದ ನಂತರ ಆರ್.ಅಶೋಕ್ ಮೊದಲ ಬಾರಿ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದರು ಈ ವೇಳೆ ಹೂಗುಚ್ಚ ನೀಡಿ ಸ್ವಾಗತ ಕೋರಲಾಯಿತು. ನಂತರ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಂದ ಅಶೋಕ್‌ಗೆ ಆರತಿ ಎತ್ತಿ ಸ್ವಾಗತ ಕೋರಲಾಯಿತು. ಬಿಜೆಪಿ ಕಚೇರಿಗೆ ಆಗಮಿಸಿದ ಆರ್ ಅಶೋಕ್ ನೇರವಾಗಿ ಅಧ್ಯಕ್ಷರ ಕೊಠಡಿಗೆ ತೆರಳಿ ಅಧ್ಯಕ್ಷರನ್ನು ಭೇಟಿ ಮಾಡಿದರು. ನಂತರ ಪಕ್ಷದ ಕಚೇರಿಯಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಜಗನ್ನಾಥರಾವ್ ಜೋಶಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಕಚೇರಿ ಮುಂಭಾಗಕ್ಕೆ ಬಂದ ಅಶೋಕ್ ಹಾಗು ವಿಜಯೇಂದ್ರಗೆ ಕಾರ್ಯಕರ್ತರು ಪುಷ್ಪವೃಷ್ಠಿ ಮಾಡಿದರು. ಜೆಸಿಬಿ ಮೂಲಕ ಬೃಹತ್ ಕಿತ್ತಳೆ ಹಣ್ಣಿನ ಹಾರವನ್ನು ಹಾಕಿದರು.
ಇದನ್ನೂ ಓದಿ: ಅಶೋಕ್‌ಗೆ ವಿಪಕ್ಷ ನಾಯಕನ ಸ್ಥಾನ ನೀಡಿ ಉರಿಯೋ ಬೆಂಕಿಗೆ ತುಪ್ಪ ಹಾಕಿದ್ದಾರೆ: ಪ್ರಿಯಾಂಕ್ ಖರ್ಗೆ