ಬೆಂಗಳೂರು : ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಸಂಘಟನಾತ್ಮಕ ಚಟುವಟಿಕೆ ಆರಂಭಿಸಿರುವ ಬಿ ವೈ ವಿಜಯೇಂದ್ರ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ಕೇಶವಕೃಪಾಗೆ ಭೇಟಿ ನೀಡಿ ಸಂಘದ ಹಿರಿಯರ ಮಾರ್ಗದರ್ಶನ ಪಡೆದುಕೊಂಡರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಪ್ರಕಟಗೊಂಡ ನಂತರದ ಮೊದಲ ದಿನವೇ ಬೂತ್ ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡುವ ಮೂಲಕ ಅಧಿಕೃತವಾಗಿ ಸಂಘಟನಾತ್ಮಕ ಚಟುವಟಿಕೆ ಆರಂಭಿಸಿರುವ ಬಿ ವೈ ವಿಜಯೇಂದ್ರ ನಂತರ ನೇರವಾಗಿ ಚಾಮರಾಜಪೇಟೆಗೆ ತೆರಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೇಂದ್ರ ಕಚೇರಿ ಕೇಶವಕೃಪಾಗೆ ಭೇಟಿ ನೀಡಿದ ಅವರು, ಸಂಘದ ಸಂಸ್ಕೃತಿಯಂತೆ ಭಾರತಮಾತೆ ಮತ್ತು ಸೀತಾ ರಾಮ ಲಕ್ಷ್ಮಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಸಂಘಟನಾತ್ಮಕ ಹೊಣೆಗಾರಿಕೆ ನಿಭಾಯಿಸುವ ಕುರಿತು ಮಾರ್ಗದರ್ಶನ ಪಡೆದುಕೊಂಡರು.
ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ರಾಜ್ಯ ನಾಯಕರು ಆಗಾಗ ಸಂಘದ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸುವುದು ವಾಡಿಕೆಯಾಗಿದೆ. ಪಕ್ಷದಿಂದ ಆಯ್ಕೆಯಾದ ನೂತನ ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಸಂಘದ ಕಚೇರಿಗೆ ಭೇಟಿ ನೀಡುವುದು ಸಂಪ್ರದಾಯ. ಅದರಂತೆ ಇಂದು ವಿಜಯೇಂದ್ರ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಹಿರಿಯರಿಂದ ಆಶೀರ್ವಾದ ಪಡೆದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ವಿಜಯೇಂದ್ರ ಭೇಟಿ : ಬಿ ವೈ ವಿಜಯೇಂದ್ರ ಅವರು ಇಲ್ಲಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಬೂತ್ ಅಧ್ಯಕ್ಷ ಶಶಿಧರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಯಕರ್ತರ ರಕ್ತದ ಕಣಕಣದಲ್ಲಿಯೂ ಹೋರಾಟದ ಗುಣ ಇದೆ. ನಾವು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ನ ಅಬ್ಬರಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದೇವೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಹಬ್ಬದ ನಂತರ ಪದಗ್ರಹಣ : ದೀಪಾವಳಿ ಹಬ್ಬದ ನಂತರ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ಮಾಡಲಿದ್ದಾರೆ. ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಇದ್ದು, ಸಭೆ ನಂತರವೇ ಕಾರ್ಯಕ್ರಮ ನಡೆಸಿ ಪದಗ್ರಹಣ ಮಾಡಲು ಚಿಂತನೆ ನಡೆಸಿದ್ದಾರೆ. ಪಕ್ಷದ ಕಚೇರಿಗೂ ಹಬ್ಬದ ನಂತರವೇ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಮೊದಲ ಹೆಜ್ಜೆ ಬೂತಿನೆಡೆಗೆ, ಗುರಿಯು ಗುಲುವಿನೆಡೆಗೆ, ಕಾರ್ಯಕರ್ತ ನಮ್ಮ ಶಕ್ತಿ, ಮತದಾರ ನಮ್ಮ ಬಂಧು; ವಿಜಯೇಂದ್ರ