ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಂಚ್ ಮೀಟ್ ನಡೆಸಿದ್ದು, ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು.
ಯಲಹಂಕದ ರಮಡ ರೆಸಾರ್ಟ್ನಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ಪ್ರಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ ಭಾಗವಹಿಸಿದರು. ಕಾರ್ಯಕ್ರಮದ ನಂತರ ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ರಾಜ್ಯ ನಾಯಕರ ಜೊತೆ ಭೋಜನ ಕೂಟದೊಂದಿಗೆ ಅನೌಪಚಾರಿಕ ಸಭೆ ನಡೆಸಿದರು.
ಅಗ್ನಿಪಥ ಯೋಜನೆ ವಿರೋಧಿಸಿ ದೇಶದ ಹಲವು ರಾಜ್ಯದಲ್ಲಿ ಹಿಂಸಾಚಾರ ನಡೆದಿದ್ದು, ರಾಜ್ಯದಲ್ಲಿನ ಸ್ಥಿತಿ ಕುರಿತು ನಡ್ಡಾ ಮಾಹಿತಿ ಪಡೆದುಕೊಂಡರು. ರಾಜ್ಯದಲ್ಲಿ ನಿಧಾನವಾಗಿ ಪ್ರತಿಭಟನೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ಕೇಂದ್ರದ ಯೋಜನೆಗಳ ವಿರುದ್ಧ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.
ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅಲೆ ಏಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇರಬೇಕೆಂದು ಬೊಮ್ಮಾಯಿ ಮತ್ತು ಕಟೀಲ್ಗೆ ನಡ್ಡಾ ಸೂಚನೆ ನೀಡಿದರು. ಆದರೆ, ಲಂಚ್ ಮೀಟ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪವಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಡ್ಡಾ ಜೊತೆ ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್ನಲ್ಲೇ ಚಿತ್ರದುರ್ಗಕ್ಕೆ ತೆರಳಲಿದ್ದು, ಈ ವೇಳೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸಿದ ಜೆ.ಪಿ ನಡ್ಡಾ.. ಸಚಿವ ಸಂಪುಟ ವಿಸ್ತರಣೆ ಕುರಿತು ನಡೆಯುತ್ತಾ ಮಾತುಕತೆ?