ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಿಸಿಬಿ ಡಿಸಿಪಿ ರವಿಕುಮಾರ್ಗೆ ಆದೇಶಿಸಿದ್ದಾರೆ.
ಕಳೆದ ಆ.12ರಂದು ಶಾಸಕರ ಮನೆಗೆ ನುಗ್ಗಿ ಕಾರುಗಳಿಗೆ ಬೆಂಕಿ ಇಟ್ಟ ಆರೋಪದಡಿ ಬೊಮ್ಮನಹಳ್ಳಿ ಪೊಲೀಸರು ತನಿಖೆ ನಡೆಸಿ ನೇಪಾಳ ಮೂಲದ ಗಾರ್ವೇ, ಭಾವಿಪಾಳ್ಯದ ಸಾಗರ್ ಹಾಗೂ ಬೇಗೂರಿನ ಶ್ರೀಧರ್ ಮತ್ತು ಬಂಡೆಪಾಳ್ಯ ನಿವಾಸಿ ನವೀನ್ ಕಾಳಪ್ಪ ಎಂಬುವರನ್ನು ಬಂಧಿಸಿದ್ದರು.
ಘಟನೆಯ ವಿವರ:
ಪ್ರಕರಣ ಪ್ರಮುಖ ಆರೋಪಿ ಸಾಗರ್ ಕೊರೊನಾ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಂಡಿದ್ದು, ಉದ್ಯೋಗ ಕೇಳಲು ಶಾಸಕರ ಭೇಟಿಗೆ ಮೂರು ಭಾರಿ ಪ್ರಯತ್ನಿಸಿ ಹತಾಶನಾಗಿದ್ದ. ಅಲ್ಲದೆ ಆತ ಸತೀಶ್ ರೆಡ್ಡಿ ವಿವಿಧ ಕಂಪನಿಗಳ ಕಾರಿನಲ್ಲಿ ಓಡಾಡುವುದನ್ನು ಗಮನಿಸಿದ್ದಾನೆ. ಶಾಸಕರ ಶ್ರೀಮಂತಿಕೆ ಕಂಡು ಕೆಂಡಮಂಡಲವಾಗಿದ್ದು, ತನ್ನ ಇಬ್ಬರು ಸ್ನೇಹಿತರ ಬಳಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಚಾರ ತಿಳಿದುಬಂದಿತ್ತು.
ಬಳಿಕ ಮೂವರು ಸೇರಿಕೊಂಡು ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಡಲು ತೀರ್ಮಾನಿಸಿದ್ದರು. ಇದರಂತೆ ಮದ್ಯ ಸೇವಿಸಿ ಆಗಸ್ಟ್ 11ರಂದು ಮಧ್ಯರಾತ್ರಿ ಬೇಗೂರಿನಲ್ಲಿರುವ ಶಾಸಕರ ಮನೆ ಹಿಂಭಾಗದ ಗೇಟು ಹಾರಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಫಾರ್ಚೂನರ್ ಸೇರಿದಂತೆ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.