ಬೆಂಗಳೂರು: ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ನನ್ನ ಮತ್ತು ನಮ್ಮ ಸಿಬ್ಬಂದಿಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ತೋರಿಸಿದ್ದು, ಅದರಲ್ಲಿರುವವರು ನಮಗೆ ಪರಿಚಿತರಲ್ಲ, ಉದ್ದೇಶ ಪೂರ್ವಕವಾಗಿ ತುಂಬಾ ದಿನಗಳ ಹಿಂದೆ ಪ್ಲಾನ್ ಮಾಡಿ ಕೃತ್ಯ ಎಸಗಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ನನ್ನನ್ನು ಹೆದರಿಸಲು ಈ ಕೃತ್ಯ!
ಪ್ರಕರಣದ ಬಗ್ಗೆ ಬೊಮ್ಮನಹಳ್ಳಿ ನಿವಾಸದ ಬಳಿ ಪ್ರತಿಕ್ರಿಯೆ ನೀಡಿರುವ ಶಾಸಕರು, ಹೆದರಿಸಬೇಕು ಎಂಬ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಉತ್ತರ ಭಾರತದ ಓರ್ವ ವ್ಯಕ್ತಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹಲವು ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ವಿಧ್ವಂಸಕ ಕೃತ್ಯಮಾಡಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದಿದ್ದಾರೆ.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾರುಗಳಿಗೆ ಬೆಂಕಿ ಹಚ್ಚಿದ ಬಳಿಕ ಒಂದು ದ್ವಿಚಕ್ರವಾಹನವನ್ನೂ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಆರೋಪಿಗಳು ಈ ಹಿಂದೆಯೂ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದರು.
ತುಂಬಾ ಜನರನ್ನು ಟಾರ್ಗೆಟ್ ಮಾಡಿರಬಹುದು!
ನಕ್ಸಲಿಸಂ ಹಿನ್ನೆಲೆಯುಳ್ಳವರು ಕೃತ್ಯ ಎಸಗಿರಬಹುದಾದ ಸಾಧ್ಯತೆ ಇದೆ ಅನಿಸುತ್ತಿದೆ. ನಾನೊಬ್ಬ ಮಾತ್ರ ಅಲ್ಲ ತುಂಬಾ ಜನರನ್ನು ಅವರು ಟಾರ್ಗೆಟ್ ಮಾಡಿರಬಹುದು. ಈ ಬಗ್ಗೆ ಪೊಲೀಸರ ಸಂಪೂರ್ಣ ತನಿಖೆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಪ್ರಕರಣ ಕುರಿತಂತೆ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಆಗಸ್ಟ್ 11ರ ರಾತ್ರಿ ದುಷ್ಕರ್ಮಿಗಳು ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದರು. ಬೆಂಕಿ ಹಚ್ಚಿದ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ.
ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ : ಮೂವರು ಆರೋಪಿಗಳ ಬಂಧನ