ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆರೋಗ್ಯ ಸರಿ ಇಲ್ಲವೆಂದು ಹೇಳುತ್ತಿದ್ದು, ಇದು ವಿಶ್ವಾಸಮತದಿಂದ ದೂರ ಉಳಿಯಲು ಮಾಡುತ್ತಿರುವ ನಾಟಕ, ಇದು ನಾಟಕವಾಗೇ ಉಳಿಯುತ್ತದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ಕುಮಾರಸ್ವಾಮಿ ಹಾಜರಿರಲಿ ಇಲ್ಲದೇ ಇರಲಿ, ಅವರು ಮಂಡಿಸಿದ ವಿಶ್ವಾಸಮತವನ್ನ ಮತಕ್ಕೆ ಹಾಕುವ ಅವಕಾಶ ಇದೆ. ನನಗೆ ಅವರು ಗೈರಾಗುವ ಮಾಹಿತಿ ಇಲ್ಲ. ಒಂದು ವೇಳೆ ಮಾಧ್ಯಮದಲ್ಲಿ ಬಂದ ಸುದ್ದಿ ನಿಜವೇ ಆದ್ರೆ ಸಿಎಂ ಇಲ್ಲದ್ದಿದ್ರೂ ಮತಕ್ಕೆ ಹಾಕಬಹುದು. ಆರೋಗ್ಯ ಸರಿಯಿಲ್ಲ ಎಂಬ ನಾಟಕದಿಂದ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ನಾನು ಅಧಿಕಾರಕ್ಕೆ ಅಂಟಿಕೊಳ್ಳುವವನಲ್ಲ ಎಂದು ಹೇಳುತ್ತಾರೆ. ಆದರೆ ಅವರು ಅಧಿಕಾರ ಬಿಡಲು ಸಿದ್ದರಿಲ್ಲ. ಟಿವಿ ಮಾಧ್ಯಮಗಳಲ್ಲಿ ಸಿಎಂ ಆರೋಗ್ಯ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಆರೋಗ್ಯ ಸರಿ ಇಲ್ಲದ ನೆಪ ಹೇಳಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಶಾಸಕರ ಮನವೊಲಿಸುವ ಕೆಲಸ ಯಶಸ್ವಿಯಾಗಿಲ್ಲ. ಈಗಾಗಲೇ ಸ್ವೀಕರ್ ನಾಳೆ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಿದ್ದಾರೆ. ನಾಳೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಜರುಗಲೇಬೇಕು ಎಂದರು.