ಬೆಂಗಳೂರು: ನೆರೆ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರನ್ನು ಕೇಂದ್ರ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಎಂ ಅವರನ್ನು ಟಾರ್ಗೆಟ್ ಮಾಡಲು ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಈಗ ಚುನಾವಣೆ ಇಲ್ಲ ಎಂಬ ಭಾವನೆ ಸರಿಯಲ್ಲ. ರಾಜ್ಯದಲ್ಲಿ ಜನ 25 ಸಂಸದರನ್ನು ಆಯ್ಕೆ ಮಾಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಇಷ್ಟು ಸಂಖ್ಯೆ ಎಲ್ಲಿದೆ?. ಹೀಗೆ ಮುಂದುವರೆಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಎಂತೆಂತವರನ್ನೋ ಜನ ಮನೆಗೆ ಕಳಿಸಿದ್ದಾರೆ. ಅಂಥದ್ರಲ್ಲಿ ಇವರೆಲ್ಲ ಯಾವ ಲೆಕ್ಕ. ಇವರನ್ನು ಕೆಳಗಿಳಿಸುವುದು ನಾವಲ್ಲ, ಜನ ಇಳಿಸುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದು ನಾವು. ಜನರಿಗೆ ನಾವು ಉತ್ತರ ನೀಡಬೇಕು. ಇಡೀ ಉತ್ತರ ಕರ್ನಾಟಕದ ಜನ ಪರದಾಡುತ್ತಾ ಇದ್ದಾರೆ. ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡ್ತಾರೆ ಅಂದ್ರೆ ನಮ್ಮ ಜನ ಏನು ಮಾಡಿದ್ದಾರೆ?. ಜನರಿಗೆ ನಾವೇನು ಉತ್ತರ ಕೊಡಬೇಕು?. ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕೇಂದ್ರಕ್ಕೆ ನಮ್ಮ ಒಂದು ನಿಯೋಗ ಕೊಂಡೊಯ್ಯಿರಿ. ನಾವು ಮಾತಾಡುತ್ತೇವೆ. ಹಿಂದೆ ನಾನೂ ಸಂಸದನಾಗಿದ್ದವನು. ನನಗೂ ಎಲ್ಲ ಅನುಭವ ಇದೆ. ನಮ್ಮ ಸಂಸದರು ಅದನ್ನು ಪ್ರಶ್ನೆ ಮಾಡಬೇಕು ಎಂದು ಕೇಂದ್ರ ನಾಯಕರ ವಿರುದ್ಧ ಹಾಗೂ ರಾಜ್ಯದ ಸಂಸದರ ವಿರುದ್ಧ ಯತ್ನಾಳ್ ನೇರ ವಾಗ್ದಾಳಿ ನಡೆಸಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ:
ಇದೇ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಯತ್ನಾಳ್ ವಾಗ್ದಾಳಿ ನಡೆಸಿದರು.
ಈಗ ಯಡಿಯೂರಪ್ಪನ ಬಗ್ಗೆಯೇ ಕೆಲವರು ಮಾತನಾಡುತ್ತಾರೆ. ಗೂಟದ ಕಾರು ಇಟ್ಟುಕೊಂಡು ಓಡಾಡುವವರೇ ಹಿಂಗೆ ಮಾತಾಡಿದರೆ ಹೇಗೆ?. ಹಾಗಾದರೆ ಸಚಿವ ಸ್ಥಾನದಲ್ಲಿ ಯಾಕೆ ಇರುತ್ತೀರಿ, ರಾಜೀನಾಮೆ ಕೊಡಿ. ಪಕ್ಷ ಕಟ್ಟಿರುವ ತುಂಬಾ ಜನ ಕ್ಯೂನಲ್ಲಿದ್ದಾರೆ ಎಂದು ಪರೋಕ್ಷವಾಗಿ ಕಿಡಿ ಕಾರಿದರು.
ಸಂಸದ ತೇಜಸ್ವಿ ಸೂರ್ಯನ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಎಸಿ ರೂಮಿನಲ್ಲಿ ಕೂತು ಪಕ್ಷ ಕಟ್ಟುವುದಲ್ಲ. ಹಳ್ಳಿ-ಹಳ್ಳಿ ಅಲೆದು ಪಕ್ಷ ಕಟ್ಟಿರುವವರು ನಾವು. ಇಂಗ್ಲಿಷ್ ಬಂದ ಮಾತ್ರಕ್ಕೆ ಅಂತಾರಾಷ್ಟ್ರೀಯ ನಾಯಕರಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.