ಬೆಂಗಳೂರು : ರಾಜ್ಯದ ಪ್ರತಿ ಮತದಾರರನ್ನು ತಲುಪಲು ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯದಲ್ಲಿ ವಿಶೇಷ ಮಹಾ ಪ್ರಚಾರ ಅಭಿಯಾನ ನಡೆಸಲಿದ್ದು, 98 ರಾಷ್ಟ್ರೀಯ ನಾಯಕರು ಹಾಗೂ 150 ರಾಜ್ಯ ನಾಯಕರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 224 ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮುಗಿದಿದೆ. ಅಮಿತ್ ಶಾ, ನಡ್ಡಾ ಪ್ರವಾಸ ಆರಂಭವಾಗಿದೆ. ಮನೆ ಮನೆಗೆ ಭೇಟಿ ಕಾರ್ಯಕ್ರಮ ಆರಂಭವಾಗಿದೆ. ಎಲ್ಲ ಚುನಾವಣೆಗಳಲ್ಲಿಯೂ ಮನೆ ಭೇಟಿಗೆ ಆದ್ಯತೆ ನೀಡಲಿದ್ದೇವೆ. ಬೂತ್ ಅಭಿಯಾನವನ್ನು ಎರಡು ತಿಂಗಳ ಹಿಂದೆಯೇ ಒಮ್ಮೆ ಮಾಡಿದ್ದು, ಈಗ ನಾಮಪತ್ರ ಸಲ್ಲಿಕೆ ನಂತರ ಅಭ್ಯರ್ಥಿಗಳ ಪರಿಚಯ ಮಾಡಿಕೊಟ್ಟು ಮತ್ತೊಮ್ಮೆ ಅಭಿಯಾನಕ್ಕೆ ಮುಂದಾಗಿದ್ದೇವೆ ಎಂದರು.
ನಾಳೆಯಿಂದ ಎರಡ ದಿನ ವಿಶೇಷ ಮಹಾ ಪ್ರಚಾರ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ಕೇಂದ್ರ, ರಾಜ್ಯ, ಜಿಲ್ಲಾ, ತಾಲೂಕು ನಾಯಕರನ್ನು ಇರಿಸಿಕೊಂಡು ನಡೆಸಲಾಗುತ್ತದೆ. 224 ಕ್ಷೇತ್ರದಲ್ಲೂ ಅಭಿಯಾನ ನಡೆಸಲಿದ್ದು, 98 ಜನ ಕೇಂದ್ರದ ನಾಯಕರು ಹಾಗೂ ಕೇಂದ್ರ ಸಚಿವರು, 150 ಕ್ಕೂ ಹೆಚ್ಚಿನ ರಾಜ್ಯದ ನಾಯಕರನ್ನು ಇದರಲ್ಲಿ ಜೋಡಿಸಿದೆ. ಬೆಳಗ್ಗೆಯಿಂದ ಸಂಜೆವರೆಗೂ ನಮ್ಮೆಲ್ಲಾ ನಾಯಕರು ಅಭಿಯಾನದಲ್ಲಿ ತೊಡಗಿಕೊಳ್ಳಲಿದ್ದಾರೆ. ಎಲ್ಲ ಕಡೆ ರೋಡ್ ಶೋ, ಮನೆ ಮನೆ ಸಂಪರ್ಕ, ಪ್ರಮುಖರ ಸಭೆ ನಡೆಸಲಿದ್ದಾರೆ. ಜೊತೆಗೆ ಫಲಾನುಭವಿಗಳ ಜೊತೆ ಸಂವಾದ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಇದನ್ನೂ ಓದಿ : ಚುನಾವಣೆ ಬಳಿಕ ನಾಯಕತ್ವದ ನಿರ್ಧಾರ: ಪ್ರಹ್ಲಾದ್ ಜೋಶಿ ಸ್ಪಷ್ಟನೆ
ಅಭಿಯಾನದಲ್ಲಿ ಮಠ, ಮಂದಿರ ಭೇಟಿ ಇರಲಿದೆ. ಜೆಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಸಿಂಗ್, ಪ್ರಧಾನ್, ಸೀತಾರಾಮನ್, ಮಾಂಡವಿಯಾ, ಯೋಗಿ ಆದಿತ್ಯನಾಥ್, ಫಡ್ನವಿಸ್, ಸ್ಮೃತಿ ಇರಾನಿ, ಅಣ್ಣಾಮಲೈ, ಸಿಟಿ ರವಿ, ಯಡಿಯೂರಪ್ಪ, ಬೊಮ್ಮಾಯಿ, ಸದಾನಂದಗೌಡ, ಶೋಭಾ, ಅಶೋಕ್, ಸೋಮಣ್ಣ, ಕಾರಜೋಳ, ಅಶೋಕ್ ಸೇರಿ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ ಎಂದರು.
75 ಜನ ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸುವ ಕೆಲಸವಾಗಿದೆ. ಕಾರ್ಯಕರ್ತರ ಆಧಾರದಲ್ಲಿ ಈ ಬಾರಿ ಚುನಾವಣೆ ಗೆಲ್ಲಲು ಮುಂದಾಗಿದ್ದು, ಮತದಾರರನ್ನು ಮುಟ್ಟಲು ಮನೆ ಮನೆ ಅಭಿಯಾನ ನಡೆಸಲಿದ್ದೇವೆ ಎಂದರು. ಇನ್ನು ಬಂಡಾಯ ಮನವೊಲಿಕೆ ಕಾರ್ಯ ನಡೆಯುತ್ತಿದೆ. ಎಲ್ಲರ ಜೊತೆ ಮಾತುಕತೆ ಆಗಿದೆ. ಬಂಡುಕೋರರ ಮನವೊಲಿಕೆ ನಡೆದಿದೆ, ಸಂಜೆ ವೇಳೆಗೆ ಎಲ್ಲ ಗೊತ್ತಾಗಲಿದೆ ಎಂದು ಹೇಳಿದರು.
ಬಳಿಕ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಮಾತನಾಡಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಾಲ್ಕು ದಿನ ರಾಜ್ಯ ಪ್ರವಾಸಕ್ಕೆ ಸಮಯ ನೀಡಿದ್ದಾರೆ. ನಾಲ್ಕು ಭಾಗಕ್ಕೆ ನಾಲ್ಕು ದಿನ ಹಂಚಿಕೆ ಮಾಡಿದ್ದೇವೆ. ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದೊಂದು ದಿನ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ ಎಂದರು.
ಇದನ್ನೂ ಓದಿ : ಗುಂಡ್ಲುಪೇಟೆಯಲ್ಲಿ ರೋಡ್ ಶೋ ನಡೆಸುತ್ತಿರುವ ಅಮಿತ್ ಶಾ
ನಾಳೆ ಮಹಾ ಪ್ರಚಾರದ ಅಭಿಯಾನ ನಡೆಯಲಿದೆ, ಆಯಾ ಕ್ಷೇತ್ರದಲ್ಲಿ ಮಹಾಪುರುಷರ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇವೆ, ಸಂಜೆ ರ್‍ಯಾಲಿ ಇರುತ್ತೆ, ಸಾರ್ವಜನಿಕ ಸಭೆ ಕೂಡ ಆಯೋಜನೆ ಮಾಡುತ್ತೇವೆ ಏಕಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಾ ಪ್ರಚಾರ ಅಭಿಯಾನ ನಡೆಯಲಿದೆ ಎಂದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ಬಸವ ತತ್ವಕ್ಕೆ ವಿರುದ್ಧವಾದ ಆಡಳಿತ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ, ಅವರಿಗೆ ಬಡತನ, ಬಡವರ ಬಗ್ಗೆ ಗೊತ್ತಿದೆಯಾ?. ಇವರು 60 ವರ್ಷ ಆಡಳಿತ ನಡೆಸಿದರೂ ಯಾಕೆ ಗರೀಬಿ ಹಠಾವೋ ಆಗಲಿಲ್ಲ. ಶೌಚಗೃಹ, ಸೂರು, ಅಡುಗೆ ಅನಿಲ ಕೊಡಲು ಮೋದಿ ಬರಬೇಕಾಯಿತು. ಅವರು ಇದನ್ನೆಲ್ಲಾ ಕೊಟ್ಟಿದ್ದರೆ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿತ್ತು ಎಂದು ಟಾಂಗ್ ನೀಡಿದರು.