ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಅವರಿಗೆ ಈ ಬಾರಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಗೆದ್ದಿದ್ದ ಮೋಹನ್ ಲಿಂಬಿಕಾಯಿ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಇದಕ್ಕೆ ಪಕ್ಷ ಬಹುತೇಕ ಒಪ್ಪಿಗೆ ನೀಡಿದೆ. ಪಕ್ಷದಲ್ಲಿ ಯಡಿಯೂರಪ್ಪ ಪ್ರಾಬಲ್ಯ ಇನ್ನು ಇದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ 4 ಸದಸ್ಯ ಸ್ಥಾನಗಳಿಗೆ ಚುನಾವಣೆಯು 2022ರ ಜೂನ್ ತಿಂಗಳಲ್ಲಿ ನಡೆಯಲಿದೆ. ಪ್ರಸ್ತುತ ಹಾಲಿ ಸದಸ್ಯರ ಅವಧಿಯು ಕ್ರಮವಾಗಿ 2022ರ ಜ.5ರಂದು ಹಾಗೂ 2022ರ ಜುಲೈ 4ರಂದು ಕೊನೆಗೊಳ್ಳಲಿದೆ. ನಾಲ್ಕೂ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಬಿಡುಗಡೆಗೊಳಿಸಿ ಪಟ್ಟಿಯನ್ನು ಆಯೋಗ ಅಂತಿಮಗೊಳಿಸಿದೆ.
ವಾಯವ್ಯ ಪದವೀಧರರ ಕ್ಷೇತ್ರದಲ್ಲಿ 50,807 ಮತದಾರರು, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ 1,08,090 ಮತದಾರರು, ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 14,359 ಮತದಾರರು, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 12,607 ಮತದಾರರಿದ್ದಾರೆ. ಡಿ.8ರಂದು ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಡಿ. 27ರೊಳಗೆ ಆಕ್ಷೇಪಣೆ ಸಲ್ಲಿಕೆ, ಹೆಸರು ಸೇರಿಸಲು, ಬದಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಸಮಯ ಮುಗಿದ ಹಿನ್ನೆಲೆ ಪಟ್ಟಿಯನ್ನು ಆಯೋಗ ಅಂತಿಮಗೊಳಿಸಿದೆ. ಸತತ 7 ಬಾರಿ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಕಣಕ್ಕಿಳಿಯಲು ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮುಂದಾಗಿದ್ದು, ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದಾರೆ.
ಈ ಹಿಂದೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರನ್ನು ಸೋಲಿಸಿದ್ದ ಇವರು, ಈ ಸಲ ಶಿಕ್ಷಕರ ಕ್ಷೇತ್ರದಿಂದ ತಮಗೆ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ಇವರ ಜೊತೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ, ಕರ್ನಾಟಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಸಂದೀಪ್ ಬೂದಿಹಾಳ ಕೂಡ ಟಿಕೆಟ್ ಕೇಳಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಗುಡ್‌ನ್ಯೂಸ್ : ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ
ಈ ಮೂವರ ನಡುವೆ ಇದೀಗ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿಗೆ ಹೋಗಿ ಮರಳಿ ಬಿಎಸ್ವೈ ಜೊತೆಯಲ್ಲಿಯೇ ಬಿಜೆಪಿಗೆ ವಾಪಸಾಗಿದ್ದ ಮೋಹನ್ ಲಿಂಬಿಕಾಯಿ ಅವರಿಗೆ ಬಿಜೆಪಿ ಮಣೆ ಹಾಕಿದೆ. ಯಡಿಯೂರಪ್ಪ ಅವರ ಶಿಫಾರಸ್ಸಿಗೆ ಒಪ್ಪಿ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.
ಹೊರಟ್ಟಿ ಅವರಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಈಗಿನಿಂದಲೇ ತಯಾರಿ ನಡೆಸಿದೆ. ಈಗಾಗಲೇ ಎರಡ್ಮೂರು ಸುತ್ತಿನ ಸಭೆ ನಡೆಸಿರುವ ಬಿಜೆಪಿ ಯಾರನ್ನು ಕಣಕ್ಕಿಳಿಸಿದರೆ ಉತ್ತಮ ಎಂಬ ಲೆಕ್ಕಾಚಾರ ಹಾಕಿ ಅಂತಿಮವಾಗಿ ಲಿಂಬಿಕಾಯಿ ಪ್ರಬಲ ಪೈಪೋಟಿ ನೀಡಬಲ್ಲರು ಎನ್ನುವ ನಿರ್ಣಯಕ್ಕೆ ಬಂದಿದೆ. ಹೊರಟ್ಟಿ ಅವರನ್ನು ಕಟ್ಟಿ ಹಾಕಲು ಲಿಂಬಿಕಾಯಿಗೆ ಮಣೆ ಹಾಕಲು ನಿರ್ಧರಿಸಿದೆ ಎನ್ನಲಾಗಿದೆ.
ವಾಯವ್ಯ ಪದವೀಧರ ಕ್ಷೇತ್ರದಿಂದ ಹಾಲಿ ಸದಸ್ಯ ಹನುಮಂತ ನಿರಾಣಿ, ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಅರುಣ್ ಶಹಾಪುರ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಾಕಿ ಉಳಿದಿದ್ದು, ಏಳು ಮಂದಿ ಆಕಾಂಕ್ಷಿಗಳಿದ್ದಾರೆ.
ಮೈ.ವಿ. ರವಿಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ. ಫಣೀಶ್, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್ ಯೋಗೇಂದ್ರ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಈ.ಸಿ. ನಿಂಗರಾಜೇಗೌಡ, ಯಮುನಾ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಗೋ.ಮಧುಸೂದನ್ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಲ್ಕು ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರಿದ್ದು, ಸಂಖ್ಯೆ ಹೆಚ್ಚಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಈಗಿನಿಂದಲೇ ಚುನಾವಣಾ ತಯಾರಿ ಆರಂಭಿಸಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಚುನಾವಣಾ ಅಖಾಡಕ್ಕಿಳಿಯಲು ರಂಗ ಸಜ್ಜುಗೊಳಿಸುತ್ತಿದೆ.