ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಯಾವ ಶಾಸಕ ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎನ್ನುವ ಕುರಿತು ಮಾಹಿತಿ ನೀಡಲಾಗುತ್ತದೆ. ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಮತದಾನ ನಡೆಯಲಿದ್ದು, ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಮೂರು ಸ್ಥಾನಗಳಿಗೆ ಸ್ಪರ್ಧೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಬಿಜೆಪಿ ಅಭ್ಯರ್ಥಿಗಳಾಗಿದ್ದು, ಶಾಸಕರ ಮತದಾನದ ಮಾಹಿತಿ ನೀಡುವ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಪಕ್ಷದ ಯಾವ ಯಾವ ಶಾಸಕರು ಯಾವ ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎನ್ನುವ ಮಾಹಿತಿ ನೀಡಲಾಗುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟ ಸಹೋದ್ಯೋಗಿಗಳು ಹಿರಿಯ ಶಾಸಕರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮತ ಚಲಾಯಿಸಲಿದ್ದಾರೆ. ಗೆಲ್ಲಲು 45 ಮತಗಳ ಅಗತ್ಯವಿದ್ದು, ಒಂದು ಮತವನ್ನು ಹೆಚ್ಚುವರಿಯಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಹಂಚಿಕೆ ಮಾಡಿದ್ದು, ಅದರಂತೆ 46 ಶಾಸಕರಿಗೆ ನಿರ್ಮಲಾ ಪರ ಮತ ಚಲಾಯಿಸಲು ಸೂಚನೆ ನೀಡಲಾಗುತ್ತದೆ.
ನಟ ಜಗ್ಗೇಶ್ಗೂ 45 ಮತಗಳ ಹಂಚಿಕೆ ಮಾಡಿದ್ದು, ಜಗ್ಗೇಶ್ ಪರ 45 ಶಾಸಕರಿಗೆ ಮತದಾನ ಮಾಡಲು ಸೂಚನೆ ನೀಡಲಾಗುತ್ತದೆ. ಇನ್ನುಳಿದ 31 ಶಾಸಕರು ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಪರ ಮತ ಚಲಾಯಿಸಲಿದ್ದು, ಮೊದಲೆರಡು ಅಭ್ಯರ್ಥಿಗಳಿಗೆ ಮತ ಹಾಕುವ 91 ಶಾಸಕರಿಗೆ ಲೆಹರ್ ಸಿಂಗ್ ಪರ ದ್ವಿತೀಯ ಪ್ರಾಶಸ್ತ್ಯದ ಮತ ಚಲಾಯಿಸಲು ಸೂಚನೆ ನೀಡಲಾಗುತ್ತದೆ.
ಪಕ್ಷದ ಪರ ಏಜೆಂಟ್ ಯಾರು?: ಮತದಾನದ ವೇಳೆ ಪಕ್ಷದ ಅಧಿಕೃತ ಏಜೆಂಟ್ಗೆ ಮತವನ್ನು ತೋರಿಸಿಯೇ ಚಲಾವಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಯಾರೇ ಅಡ್ಡಮತ ಚಲಾಯಿಸಿದರೂ ಅದು ಗೊತ್ತಾಗಲಿದೆ. ಹಾಗಾಗಿ ಪಕ್ಷದ ಪರ ಏಜೆಂಟ್ ಯಾರು ಎನ್ನುವುದನ್ನು ಶಾಸಕಾಂಗ ಸಭೆಯಲ್ಲೇ ಅಂತಿಮಗೊಳಿಸಲಾಗುತ್ತಿದೆ. ಮೊದಲ ಅಭ್ಯರ್ಥಿ ಪರ ಅಗತ್ಯ ಮತ ಬಿದ್ದ ನಂತರವೇ ಎರಡನೇ ಅಭ್ಯರ್ಥಿ ಪರ ಮತ ಚಲಾವಣೆ ನಡೆಯಲಿದೆ. ಕಡೆಯದಾಗಿ ಮೂರನೇ ಅಭ್ಯರ್ಥಿ ಪರ ಮತ ಹಾಕಲಾಗುತ್ತದೆ, ಇದಕ್ಕಾಗಿ ಪ್ರತ್ಯೇಕ ಸಮಯ ನಿಗದಿಪಡಿಸಿ ಅಭ್ಯರ್ಥಿವಾರು ಮತದಾನ ಮಾಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
ವಿಪ್ ಜಾರಿ: ಪಕ್ಷದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ವಿಪ್ ಜಾರಿ ಮಾಡಲಿದೆ. ಜೂನ್ 10 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕು, ಮತದಾನಕ್ಕೆ ಗೈರಾಗಬಾರದು, ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ವಿಪ್ ಜಾರಿಗೊಳಿಸಲಿದೆ.
ಇದನ್ನೂ ಓದಿ: ಜಾಮಿಯಾ ಮಸೀದಿ ಈ ಹಿಂದೆ ದೇವಸ್ಥಾನವಾಗಿತ್ತು ಎಂಬುದಕ್ಕೆ ಪೂರಕ ದಾಖಲೆ ಸಿಕ್ಕಿದೆ: ಮುತಾಲಿಕ್