ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹೈಕಮಾಂಡ್ ಮೂಲಕ ಮನವೊಲಿಕೆ ಮಾಡಿ ಪಕ್ಷದಲ್ಲಿ ತೊಡಗಿಸಿಕೊಂಡು ಹೋಗುವಂತಹ ನಿರ್ಧಾರವನ್ನು ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಸಭೆಯಲ್ಲಿ ಕೈಗೊಂಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಅವರು, ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ ವರಿಷ್ಠ ನಾಯಕರ ಸಭೆ ನಡೆಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಅಗತ್ಯ ಕ್ರಮ ವಹಿಸಲು ಎಲ್ಲರ ಸಹಕಾರ ಮುಖ್ಯ. ಹಾಗಾಗಿ ಎಲ್ಲರನ್ನೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಪಕ್ಷದ ಅಭ್ಯರ್ಥಿಗಳ ಜಯಭೇರಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವ ಕುರಿತು ಸಮಾಲೋಚನೆ ನಡೆಸಲಾಯಿತು. ಯಾವ ರೀತಿ ತಯಾರಿ ಬೇಕು ಎಂದು ಮುಖಂಡರು ಸಲಹೆ ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಿ ಜೆಡಿಎಸ್ ಸಹಕಾರವನ್ನೂ ಪಡೆದು ಒಗ್ಗಟ್ಡಿನಿಂದ ಕೆಲಸ ಮಾಡುವ ನಿರ್ಣಯ ಕೈಗೊಳ್ಳಲಾಯಿತು ಎಂದರು.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೇಂದ್ರದ ವರಿಷ್ಠರ ಮೂಲಕ ಯತ್ನಾಳ್ ಜೊತೆ ಮಾತುಕತೆ ನಡೆಸಿ ಮನವೊಲಿಕೆ ಮಾಡಬೇಕು. ನಂತರ ಅವರ ಸಹಕಾರ ಪಡೆದು ಮುನ್ನಡೆಯಬೇಕು. ಸಮಾಜದಲ್ಲಿ ಬಹಿರಂಗವಾಗಿ ಹೇಳಿಕೆ ನೀಡದಂತೆ ಹೇಳುವ ಮೂಲಕ ಮನವೊಲಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಯತ್ನಾಳ್ ಮತ್ತು ವಿ ಸೋಮಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದ್ದೇವೆ. ಮತ್ತೊಮ್ಮೆ ಬಹುಮತದಿಂದ ಮೋದಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಎಲ್ಲಾ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಕುರಿತು ಚರ್ಚೆ ನಡೆಯಿತು ಎಂದು ಮಾಹಿತಿ ನೀಡಿದರು.
ನಾಡಿನ ಅಸ್ಮಿತೆ ಭಾಷೆ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟತೆ ಇದೆ. ನಾಡಿನ ಎಲ್ಲಾ ವಾಣಿಜ್ಯ ಫಲಕಗಳಲ್ಲಿ 60 ಪರ್ಸೆಂಟ್ ಕನ್ನಡ ಪರಿಪಾಲನೆ ಆಗಬೇಕು. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಶಾಂತಿ, ಸೌಹಾರ್ದತೆಗೆ ರಾಜ್ಯ ಹೆಸರಾಗಿದೆ. ಹಾಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ಇದೆ. ಬೋರ್ಡ್ಗಳಲ್ಲಿ 60 ಪರ್ಸೆಂಟ್ ನಾಡಿನ ಭಾಷೆ ಬಳಕೆಯಾಗಬೇಕು ಎಂದರು.
ಮಾಜಿ ಸಿಎಂ ಸದಾನಂದಗೌಡರ ನಿವೃತ್ತಿ ಮರುಪರಿಶೀಲಿಸಿ ಎಂದು ಒತ್ತಾಯಿಸಲು ನಾವೆಲ್ಲಾ ಡಿವಿಎಸ್ ನಿವಾಸಕ್ಕೆ ಹೋಗಿದ್ದೆವು. ಪಕ್ಷದ ನಿರ್ಧಾರ ಗೌರವಿಸಿ ಎಂದು ಹೇಳಿದ್ದೇವೆ. ವರಿಷ್ಠ ನಾಯಕರ ಭಾವನೆ ತಿಳಿಸುವ ಕೆಲಸ ಮಾಡಿದ್ದೇವೆ ಅಷ್ಟೇ. ಇದರಲ್ಲಿ ಯಾವುದೇ ಆಯಾಮ ಇಲ್ಲ ಎಂದು ಒಕ್ಕಲಿಗ ರಾಜಕಾರಣದ ವಿವಾದ ಕುರಿತು ಸ್ಪಷ್ಟನೆ ನೀಡಿದರು.
ಕಾಲ ಕಾಲಕ್ಕೆ ಎಲ್ಲಾ ಬದಲಾವಣೆ ಸಹಜ. ಸಂಸದೀಯ ಮಂಡಳಿ ಮಾನದಂಡದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಿದೆ. 75 ವರ್ಷದ ಮಿತಿ ಪಾಲನೆ ಕುರಿತು ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸಂದರ್ಭಕ್ಕನುಗುಣವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದರು.
ಓದಿ: ಪ್ರಧಾನಿ ಅಯೋಧ್ಯೆ ಭೇಟಿಗೆ ದಾಳಿ ಭೀತಿ: ಗುಪ್ತಚರ ಪಡೆಗಳಿಂದ ಹೈ ಅಲರ್ಟ್ ಘೋಷಣೆ