ಬೆಂಗಳೂರು: ಸಚಿವ ಸ್ಥಾನ ಸಿಗದಿರುವುದಕ್ಕೆ ಮುನಿಸಿಕೊಂಡಿರುವ ಮುನಿರತ್ನ ಅವರು ಬಿಜೆಪಿ ನಾಯಕರು ಕೈಗೂ ಸಿಗುತ್ತಿಲ್ಲ, ಮಾಧ್ಯಮ ಪ್ರತಿನಿಧಿಗಳ ಕಣ್ಣಿಗೂ ಕಾಣಿಸುತ್ತಿಲ್ಲ.
ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಅವಕಾಶ ವಂಚಿತ ಮುನಿರತ್ನ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಸಚಿವರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಸಿಎಂ ನಿವಾಸ ಕಾವೇರಿಯಲ್ಲಿಯೇ ಬೀಡುಬಿಟ್ಟಿದ್ದ ಮುನಿರತ್ನ, ನಂತರ ಇಂದು ಬೆಳಗ್ಗೆಯೂ ಸಿಎಂ ನಿವಾಸಕ್ಕೆ ದೌಡಾಯಿಸಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಂತಿಮ ಸುತ್ತಿನ ಕಸರತ್ತು ನಡೆಸಿದ್ದರು.
ಓದಿ: ಯಡಿಯೂರಪ್ಪ ಕೃತಜ್ಞತೆ ಇಲ್ಲದ ನಾಯಕ : ಸಚಿವ ಸ್ಥಾನ ತಪ್ಪಿದ್ದಕ್ಕೆ ಹಳ್ಳಿಹಕ್ಕಿ ಬೇಸರ
ಸಿಎಂ ಅಧಿಕೃತವಾಗಿ ಪಟ್ಟಿ ಪ್ರಕಟಿಸುತ್ತಿದ್ದಂತೆ ಮುನಿರತ್ನ ಮುನಿಸಿಕೊಂಡು ಮುಖ್ಯಮಂತ್ರಿ ನಿವಾಸದಿಂದ ನಿರ್ಗಮಿಸಿದರು. ಬಿಜೆಪಿ ನಾಯಕರು ಸತತವಾಗಿ ಸಂಪರ್ಕಕ್ಕೆ ಯತ್ನಿಸುತ್ತಿದ್ದರೂ ಸಿಗುತ್ತಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಮಾಧ್ಯಮ ಪ್ರತಿನಿಧಿಗಳ ಸಂಪರ್ಕಕ್ಕೂ ಸಿಗದೆ ನಾಟ್ ರೀಚಬಲ್ ಆಗಿದ್ದಾರೆ.
ಸಿಎಂ ಸೂಚನೆ ಮೇರೆಗೆ ಹಿರಿಯ ಸಚಿವರು ಮುನಿರತ್ನ ಸಂಪರ್ಕಕ್ಕೆ ಪ್ರಯತ್ನ ನಡೆಸುತ್ತಿದ್ದು, ಇದೀಗ ಮಿತ್ರಮಂಡಳಿ ಸಚಿವರಿಗೆ ಸೂಚನೆ ನೀಡಿ ಮುನಿರತ್ನರನ್ನು ಸಂಪರ್ಕಿಸಿ ಮನವೊಲಿಸುವಂತೆ ನಿರ್ದೇಶನ ನೀಡಿದ್ದಾರೆ. ಆದರೂ ಮುನಿರತ್ನ ಇನ್ನೂ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.