ಬೆಂಗಳೂರು: ಮುಂಬರಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗುರಿಯಾಗಿಸಿಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುನ್ನವೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.
ಗಣೇಶ ಚತುರ್ಥಿ ನಂತರ ರಾಜ್ಯ ಪ್ರವಾಸ ಆರಂಭಿಸಿ ಪಕ್ಷ ಸಂಘಟನೆ ಮಾಡುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದು, ಅದಕ್ಕೂ ಮೊದಲು ತವರು ಜಿಲ್ಲೆ ಪ್ರವಾಸಕ್ಕೆ ತೆರಳಿದ್ದಾರೆ. ಬಿಎಸ್ವೈ ತವರಿಗೆ ತೆರಳಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ನಾಲ್ಕು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿದ್ದಾರೆ. ಆ ಮೂಲಕ ಯಡಿಯೂರಪ್ಪ ಪ್ರವಾಸಕ್ಕೂ ಮೊದಲೇ ಅರುಣ್ ಸಿಂಗ್ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.
ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಿದ ನಂತರ ಯಾವುದೇ ನಾಯಕರು ಪ್ರವಾಸ ನಡೆಸಲು ಹೊರಟರೆ ಅದಕ್ಕೆ ಬೇರೆಯ ಅರ್ಥ ಬರಲಿದೆ. ಯಡಿಯೂರಪ್ಪ ಪ್ರವಾಸಕ್ಕೆ ಪರ್ಯಾಯ ಪ್ರವಾಸ ನಡೆಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರಲಿವೆ. ಅನಗತ್ಯವಾಗಿ ಗೊಂದಲ ಸೃಷ್ಟಿಯಾಗಲಿದೆ. ಹಾಗಾಗಿ ಯಡಿಯೂರಪ್ಪ ಪ್ರವಾಸ ಆರಂಭಿಸುವ ಮೊದಲೇ ಪಕ್ಷದಿಂದ ಅಧಿಕೃತವಾಗಿ ಪ್ರವಾಸ ಆರಂಭಿಸುವ ಮೂಲಕ ಮುಂದಾಗಲಿರುವ ಗೊಂದಲಗಳಿಗೆ ಈಗಲೇ ತೆರೆ ಎಳೆಯುವ ಪ್ರಯತ್ನಕ್ಕೆ ಅರುಣ್ ಸಿಂಗ್ ಮುಂದಾಗಿದ್ದಾರೆ ಎನ್ನಲಾಗಿದೆ.
ಮೈಸೂರಿಗೆ ಮೊದಲ ಭೇಟಿ:
ಈಗಾಗಲೇ ಮೈಸೂರಿಗೆ ಮೊದಲ ಭೇಟಿ ನೀಡಿರುವ ಅರುಣ್ ಸಿಂಗ್, ಹಳೆ ಮೈಸೂರು ಭಾಗದಲ್ಲಿ ದುರ್ಬಲವಾಗಿರುವ ಪಕ್ಷವನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ಮೈಸೂರಿನಿಂದಲೇ ನನ್ನ ಪ್ರವಾಸ ಆರಂಭಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಓದಿ: ಜೆಡಿಎಸ್ ಕುಗ್ಗುತ್ತಿದೆ, ಅದರ ಜೊತೆ ಯಾವುದೇ ಹೊಂದಾಣಿಕೆ ಇಲ್ಲ: ಅರುಣ್ ಸಿಂಗ್
ಮುಂಬರುವ ವಿಧಾನಸಭಾ ಚುನಾವಣೆಯೇ ನಮ್ಮ ಗುರಿಯಾಗಿದೆ. ಹಾಗಾಗಿ ರಾಜ್ಯ ಪ್ರವಾಸಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಆರಂಭಿಕ ಹಂತವಾಗಿ ನಾಲ್ಕು ದಿನದ ಪ್ರವಾಸ ಮಾಡುತ್ತಿದ್ದು, ಹಂತಹ ಹಂತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ.
ಯಡಿಯೂರಪ್ಪ ಪ್ರವಾಸಕ್ಕೆ ಆಕ್ಷೇಪದ ನಡುವೆಯೂ ಹೈಕಮಾಂಡ್ ಗ್ರೀನ್ ಸಿಗ್ನಲ್:
ಇತ್ತ ಯಡಿಯೂರಪ್ಪ ತವರು ಜಿಲ್ಲಾ ಪ್ರವಾಸದಲ್ಲಿದ್ದು, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಗಣೇಶ ಚತುರ್ಥಿ ನಂತರ ವಾರಕ್ಕೊಂದು ಜಿಲ್ಲೆಯಂತೆ ಪ್ರವಾಸ ತೆರಳಿ ಪಕ್ಷ ಸಂಘಟನೆಗೆ ನಿರ್ಧರಿಸಿದ್ದಾರೆ.
ಯಡಿಯೂರಪ್ಪ ಪ್ರವಾಸಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಯಡಿಯೂರಪ್ಪ ಪ್ರವಾಸಕ್ಕೆ ಸಹಮತ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಪ್ರವಾಸದ ಸಂಪೂರ್ಣ ಲಾಭ ಯಡಿಯೂರಪ್ಪ ಒಬ್ಬರ ಪಾಲಾಗದೇ ಪಕ್ಷ ಹಾಗೂ ಸಾಮೂಹಿಕ ನಾಯಕತ್ವಕ್ಕೆ ಸಿಗಬೇಕು ಎನ್ನುವುದು ಇದರ ಹಿಂದಿರುವ ಲೆಕ್ಕಾಚಾರ ಎನ್ನಲಾಗಿದೆ.
ಅರುಣ್ ಸಿಂಗ್ ಪ್ರವಾಸ ವಿವರ:
ಇಂದು ಮೈಸೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ, ಜಿಲ್ಲಾ ಕೋರ್ ಕಮಿಟಿ ಮತ್ತು ಮಂಡಲ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ್ 1 ರಂದು ಹಾಸನ ಮತ್ತು ಮಂಡ್ಯ ಜಿಲ್ಲಾ ಪದಾಧಿಕಾರಿಗಳ ಸಭೆಯು ಚನ್ನರಾಯಪಟ್ಟಣದಲ್ಲಿ ನಡೆಯಲಿದೆ. ಜಿಲ್ಲಾ ಕೋರ್ ಕಮಿಟಿ ಮತ್ತು ಮಂಡಲ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 2 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 2:45ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿ ಅಲ್ಲಿ ಅವರು ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತಲುಪಿ ಕೆ.ಕೆ.ಗೆಸ್ಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 3 ರಂದು ಬೆಳಿಗ್ಗೆ 7:15ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅವರು ದೆಹಲಿಗೆ ತೆರಳಲಿದ್ದಾರೆ.
ಓದಿ: ಮೈಸೂರಲ್ಲಿ ಕಮಲ ಅರಳಿಸಲು ಅರುಣ್ ಸಿಂಗ್ ಎಂಟ್ರಿ.. ಅರಮನೆಯಲ್ಲಿ ಯದುವೀರ್ ಜೊತೆ ಮಾತುಕತೆ