ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಮತ್ತೊಮ್ಮೆ ಚುನಾವಣಾ ಪೂರ್ವ ಮೈತ್ರಿ ಘೋಷಣೆಯಾಗಿದೆ.(BJP JDS alliance). ಹೈಕಮಾಂಡ್ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ನಡೆದಿದ್ದು, ಈ ಮೈತ್ರಿಯನ್ನು ಉಭಯ ಪಕ್ಷಗಳ ನಾಯಕರು ಸ್ವಾಗತಿಸಿದ್ದಾರೆ. 24+4 ಸ್ಥಾನಗಳ ಹಂಚಿಕೆ ನಡೆದಿದ್ದು ಇದನ್ನು ರಾಜ್ಯ ಬಿಜೆಪಿ ನಾಯಕರು ಖಚಿತಪಡಿಸಿದ್ದಾರೆ. ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ದ ಎಂದು ಘೋಷಿಸಿದ್ದಾರೆ. ಆರಂಭದಲ್ಲೇ ಯಾವುದೇ ಬಂಡಾಯವೇಳದಿರುವುದು ಮೈತ್ರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಜೆಡಿಎಸ್ಗೆ 4 ಕ್ಷೇತ್ರಗಳು: ರಾಜ್ಯದಲ್ಲಿ ಕಳೆದ ಬಾರಿ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಸ್ಥಾನ ಹಂಚಿಕೆ ಮಾಡಿಕೊಂಡಿದ್ದವು. ಆ ಮೈತ್ರಿಕೂಟಕ್ಕೆ ದಯನೀಯ ಸೋಲಾಗಿತ್ತು. ಆದರೆ ಈ ಬಾರಿ ಪ್ರತಿಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, 4 ಸ್ಥಾನ ಜೆಡಿಎಸ್ಗೆ ಕೊಟ್ಟು 24ರಲ್ಲಿ ಬಿಜೆಪಿ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಂಡಿದೆ. ಮೈತ್ರಿಯ ಮಾತುಕತೆ ಪ್ರಕಾರ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಕೇಳಿದ್ದು, ಇದಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಬಹುತೇಕ ಒಪ್ಪಿಕೊಂಡಿದ್ದಾರೆ. ಮಂಡ್ಯ ವಿಚಾರದ ಬಗ್ಗೆ ಮಾತ್ರ ಸ್ಪಷ್ಟ ನಿಲುವಿಗೆ ಬಂದಿಲ್ಲ ಎನ್ನಲಾಗಿದೆ. ಆದರೆ 4 ಸ್ಥಾನ ಕೊಡುವುದಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನವನ್ನು ಜೆಡಿಎಸ್ ಗೆದ್ದಿತ್ತು. ಅಲ್ಲದೆ ಹಾಸನ ಜೆಡಿಎಸ್ನ ಭದ್ರಕೋಟಿ. ಹಾಗಾಗಿ ಈ ವಿಚಾರದಲ್ಲಿ ಯಾವುದೇ ತಕರಾರಿಲ್ಲ. ಇದರ ಜೊತೆಗೆ ಜೆಡಿಎಸ್ ಪ್ರಬಲವಾಗಿರುವ ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಂತರ ಕ್ಷೇತ್ರಗಳ ವಿಚಾರದ ಬಗ್ಗೆ ಚರ್ಚೆಯಾಗಿದೆ. ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದರಿದ್ದರೂ ಆ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಸಮ್ಮತಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ಗೆ ಹೆಚ್ಚಿನ ಬಲವಿರುವ ಕಾರಣ ಆ ಕ್ಷೇತ್ರದ ಬಗ್ಗೆಯೂ ತಕರಾರಿಲ್ಲ. ಆದರೆ ಮಂಡ್ಯದಲ್ಲಿ ಕಳೆದ ಬಾರಿ ಸುಮಲತಾಗೆ ಬಿಜೆಪಿ ಬೆಂಬಲ ನೀಡಿತ್ತು. ಜೊತೆಗೆ ಸುಮಲತಾ ಕೂಡ ಸರ್ಕಾರದ ಜೊತೆಗೆ ಸದಾ ಬೆಂಬಲವಾಗಿದ್ದರು. ಹೀಗಾಗಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಈಗ ಈ ಕ್ಷೇತ್ರ ಜೆಡಿಎಸ್ಗೆ ಕೊಟ್ಟರೆ ಸುಮಲತಾಗೆ ಬೇರೆ ಕ್ಷೇತ್ರ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ವಿಚಾರದಲ್ಲಿ ಚರ್ಚೆ ನಡೆದಿದೆ.
ಹೆಚ್ಚು ಸ್ಥಾನ ಗೆಲ್ಲಲು ಪಣ: ಮಂಡ್ಯ ಬದಲು ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ನೀಡುವ ಚಿಂತನೆ ನಡೆದಿದೆ. ತುಮಕೂರಿನ ಸಂಸದ ಬಸವರಾಜು ಈಗಾಗಲೇ ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತುಮಕೂರಿಗೆ ಹೊಸ ಅಭ್ಯರ್ಥಿ ಹಾಕುವ ಬದಲು ಜೆಡಿಎಸ್ಗೆ ಕೊಡಬೇಕು ಎನ್ನುವ ಚಿಂತನೆ ಇದೆ. ಆದರೆ ಇದು ಅಂತಿಮವಾಗಿಲ್ಲ. ಸದ್ಯ ನಾಲ್ಕು ಕ್ಷೇತ್ರ ಫೈನಲ್ ಆದರೂ ಮಂಡ್ಯ ವಿಚಾರದಲ್ಲಿ ಮಾತ್ರ ನಿರ್ಧಾರ ಬಾಕಿ ಉಳಿದೆ ಎನ್ನಲಾಗಿದೆ. ಇನ್ನು ಮೈತ್ರಿ ನಿರ್ಧಾರವನ್ನು ರಾಜ್ಯ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಹಾಗು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತ ಮಾಡಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ನಾಯಕ ಯೋಗೇಶ್ವರ್ ಸಹ ಮೈತ್ರಿಯನ್ನು ಸ್ವಾಗತಿಸಿದ್ದಾರೆ. ಈ ಹಿಂದೆಯೇ ಮೈತ್ರಿ ಆಗಬೇಕು ಎಂದು ಪ್ರತಿಪಾದಿಸಿದ್ದ ಯೋಗೇಶ್ವರ್ ಸಹಜವಾಗಿಯೇ ಮೈತ್ರಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹಳೆ ಮೈಸೂರು ಜನತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಬಯಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿದೆ. ಬೆಂಗಳೂರು ಗ್ರಾಮಾಂತರ ಜೆಡಿಎಸ್ಗೆ ಕೊಟ್ಟರೆ ತೊಂದರೆ ಇಲ್ಲ. ರಾಜ್ಯದಿಂದ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕು, ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದರು.
ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ಹೈಕಮಾಂಡ್ ನಿರ್ಧಾರವನ್ನು ಕೋಲಾರದ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಸ್ವಾಗತ ಮಾಡಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ನಮಗೆ ದೇಶ ಮುಖ್ಯವೇ ಹೊರತು ಸಂಸದ ಸ್ಥಾನವಲ್ಲ. ಹಾಗಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದ ಎಂದಿದ್ದಾರೆ. ಹೈಕಮಾಂಡ್ಗೆ ಎಲ್ಲವೂ ಗೊತ್ತಿದೆ. ದೇಶಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ದನಿದ್ದೇನೆ ಎಂದು ಕ್ಷೇತ್ರ ಬಿಟ್ಟುಕೊಡಲು ಕೋಲಾರ ಸಂಸದ ಮುನಿಸ್ವಾಮಿ ಬಹಿರಂಗವಾಗಿ ತಮ್ಮ ಒಪ್ಪಿಗೆ ನೀಡಿದ್ದಾರೆ. ಇನ್ನು ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಕೂಡ ಈ ಮೈತ್ರಿಯನ್ನು ಸ್ವಾಗತ ಮಾಡಿದ್ದಾರೆ. ಮೈತ್ರಿ ಕುರಿತು ಪಕ್ಷದ ಸಭೆಗಳಲ್ಲಿ ನಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಂತೆ ಈಗ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ನಿರ್ಧಾರವಾಗಿದೆ. ಈ ನಿರ್ಧಾರದಿಂದ ಎರಡೂ ಪಕ್ಷಗಳಿಗೆ ಲಾಭವಾಗಲಿದೆ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ: '4 ಸ್ಥಾನ ಬಿಟ್ಟು ಕೊಡಲು ಅಮಿತ್ ಶಾ ಒಪ್ಪಿದ್ದಾರೆ'- ಬಿಎಸ್ವೈ