ಬೆಂಗಳೂರು: ರಾಗಿಣಿ ದ್ವಿವೇದಿ ಅವರ ವೈಯಕ್ತಿಕ ಅಥವಾ ವೃತ್ತಿ ಜೀವನದ ಕಾರ್ಯ ಚಟುವಟಿಕೆಗಳಿಗೆ ಬಿಜೆಪಿ ಹೊಣೆಯಾಗುವುದಿಲ್ಲ. ಅದಕ್ಕೆ ಉತ್ತರ ನೀಡುವ ಅಗತ್ಯವೂ ಇಲ್ಲ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಕಳೆದ ಕೆಲವು ದಿನಗಳಿಂದ ಮಾದಕ ದ್ರವ್ಯ ಪಿಡುಗಿನ ವಿರುದ್ಧ ಕೈಗೊಂಡಿರುವ ಕಟ್ಟು ನಿಟ್ಟಿನ ಕ್ರಮಗಳನ್ನು ಬಿಜೆಪಿ ಸ್ವಾಗತಿಸುತ್ತದೆ. ಕಾನೂನನ್ನು ಯಾವತ್ತೂ ಗೌರವಿಸುವ ಬಿಜೆಪಿ ಮಾದಕ ದ್ರವ್ಯ ಜಾಲದಲ್ಲಿ ಸಿಕ್ಕಿಕೊಂಡಿರುವ ವ್ಯಕ್ತಿಗಳು ಯಾರೇ ಆಗಿದ್ದರೂ, ಅವರ ವಿರುದ್ಧ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ 2019ರ ಉಪಚುನಾವಣೆ ವೇಳೆ ತಮ್ಮ ಸ್ವ-ಇಚ್ಛೆಯಿಂದ ಬಿಜೆಪಿಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ವ್ಯಕ್ತಿಗಳು ಎಷ್ಟು ಪ್ರತಿಷ್ಠಿತರಾಗಿರಲಿ ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಗೃಹ ಇಲಾಖೆ ಕೈಗೆತ್ತಿಕೊಂಡಿರುವ ಕಾನೂನಿನ ಕ್ರಮಗಳು ಸ್ವಾಗತಾರ್ಹ ಮತ್ತು ಬಿಜೆಪಿ ಅದನ್ನು ಪೂರ್ಣವಾಗಿ ಬೆಂಬಲಿಸುತ್ತದೆ.
ಬಿಜೆಪಿ ಯಾವುದೇ ವ್ಯಕ್ತಿಯ ಸಮಾಜಘಾತುಕ ಚಟುವಟಿಕೆಗಳಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ. ನಾವು ಎಂದಿಗೂ ಅಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ಅಥವಾ ಬೆಂಬಲ ನೀಡುವುದಿಲ್ಲ. ಹೀಗಾಗಿ ರಾಗಿಣಿ ದ್ವಿವೇದಿ ಅವರು ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿ ಕೊಂಡಿರುವ ಹಿನ್ನೆಲೆ ಗೃಹ ಇಲಾಖೆಯ ಕೈಗೆತ್ತಿಕೊಂಡಿರುವ ಕಾನೂನು ಕ್ರಮಗಳನ್ನು ಸ್ವಾಗತಿಸುತ್ತೇವೆ. ಮಾದಕ ದ್ರವ್ಯ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿರುವ ಯಾವುದೇ ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಪಕ್ಷ ಸ್ವಾಗತಿಸುತ್ತದೆ ಎಂದರು.