ಬೆಂಗಳೂರು: "ಬಿಜೆಪಿ ಮೇಲ್ಜಾತಿಯ ಪಕ್ಷವಾಗಿದ್ದು ಶ್ರೀಮಂತರ ಪರವಾಗಿದೆ. ತಳಮಟ್ಟದವರ ಬಗ್ಗೆ ಚಿಂತನೆ ಮಾಡಲ್ಲ. ನಾಡಿನ ಅಭಿವೃದ್ದಿ ಸಹ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತಾರೆ. ಹಿಂದುತ್ವದ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಎರಡು ಅವಧಿ ಗೆದ್ದವರಿಗೆ ಈ ಬಾರಿ ಭಾವನಾತ್ಮಕ ವಿಚಾರಕ್ಕೆ ಜನರು ಮತ ಹಾಕಲ್ಲ ಎಂದು ಗೊತ್ತಾಗಿ, ಕೋಟ್ಯಂತರ ಹಣ ಖರ್ಚು ಮಾಡಲು ಮುಂದಾಗಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ಮೂವರು ಮಾಜಿ ಶಾಸಕರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡು, ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. "ಕಾಂಗ್ರೆಸ್ 135 ವರ್ಷ ಇತಿಹಾಸ ಹೊಂದಿರುವ ಪಕ್ಷ. ಬಿಜೆಪಿ ಜೆಡಿಎಸ್ಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಬಿಜೆಪಿಯವರ ಬಳಿ ಕೋಟ್ಯಂತರ ಹಣವಿದೆ. ನಾಲ್ಕು ವರ್ಷ ಅಧಿಕಾರದಲ್ಲಿ ಸಾಕಷ್ಟು ಹಣ ಗಳಿಕೆ ಮಾಡಿಕೊಂಡಿದ್ದಾರೆ. ಇನ್ನೊಬ್ಬರ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಲೋಕಾಯುಕ್ತವನ್ನು ಮುಚ್ಚಿದ್ದರು ಎನ್ನುವ ಕನಿಷ್ಠ ಕಾನೂನಿನ ಅರಿವು ಇಲ್ಲದವರು ಇತರರನ್ನು ದೂಷಿಸಿ ಮಾತನಾಡುತ್ತಾರೆ."
"ಆದರೆ ನಾವು ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಎಸಿಬಿ ರಚನೆ ಮಾಡಿದೆವು. ಅಂದು ಸ್ವತಃ ಲೋಕಾಯುಕ್ತರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತಿತ್ತು. ಬಿಜೆಪಿಯವರು ಅಧಿಕಾರಕ್ಕೆ ಬಂದ ತಕ್ಷಣ ಎಸಿಬಿ ರದ್ದು ಮಾಡುತ್ತೇವೆ ಎಂದಿದ್ದರು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಎಸಿಬಿ ಇದೆ. ಅದನ್ನೇಕೆ ರದ್ದು ಮಾಡಿಲ್ಲ?. ದೇಶದ 16 ರಾಜ್ಯದಲ್ಲಿ ಎಸಿಬಿ ಇದೆ. ಕರ್ನಾಟಕದ ಎಸಿಬಿ ರಚನೆ ಸರಿ ಎಂದು ಬಿಜೆಪಿ ಸರ್ಕಾರದ ಅಡ್ವೊಕೇಟ್ ಜನರಲ್ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ನಮ್ಮ ಅವಧಿಯಲ್ಲಿ ವಿಶ್ವನಾಥ್ ಶೆಟ್ಟಿ ಲೋಕಾಯುಕ್ತರಾಗಿದ್ದರು. ಈಗ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ 8.5 ಕೋಟಿ ಸಿಕ್ಕಿದ್ದರಿಂದ 40% ಕಮಿಷನ್ ಅಲ್ಲ 50% ಸರ್ಕಾರ ಎಂಬುದು ಸಾಬೀತಾಗಿದೆ. ನೈತಿಕತೆ ಇದ್ದರೆ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದರು.
"ದಲಿತರು ಬಿಜೆಪಿಯತ್ತ ತಿರುಗಿಯೂ ನೋಡಬಾರದು. ಅವರು ಮನುವಾದಿಗಳು. ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಡಲ್ಲ. ತಳ ಸಮುದಾಯ ಬಿಜೆಪಿಯವರಿಂದ ದೂರವಾಗಬೇಕು. ಇಂದು ಬಿಜೆಪಿಗೆ ಸೇರ್ಪಡೆಗೊಂಡ ಅವರಿಗೆ ಮನೋಹರ್ ಐನಾಪುರ್ ನೀವು ಇನ್ನು ಕಾಯಂ ಆಗಿ ಇಲ್ಲೇ ಉಳಿದುಬಿಡಿ. ಮತ್ತೆ ಬಿಜೆಪಿಗೆ ಹೋಗುವ ಮನಸ್ಸು ಮಾಡಬೇಡಿ. ಪುರುಷೋತ್ತಮನನ್ನು ನಾನೇ ಮೇಯರ್ ಮಾಡಿದ್ದೆ. ನಾನು ಬೆಳೆಸಿದ ನಾಯಕ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಕ್ಕೆ ಬೇಸರ ಮಾಡಿಕೊಳ್ಳಬಾರದು. ಕೂತು ಮಾತನಾಡಬೇಕು. ವಾಪಸ್ ಬಂದಿದ್ದಕ್ಕೆ ಧನ್ಯವಾದ, ಒಳ್ಳೆಯದಾಗಲಿ" ಎಂದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಧ್ರುವ ನಾರಾಯಣ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಮ್ಮ ಅವಧಿಯಲ್ಲಿ ಕಾಫಿ ತಿಂಡಿ ಊಟಕ್ಕೆ ಖರ್ಚಾಗಿದ್ದು 3.26 ಕೋಟಿ ರೂ: ಬಿಜೆಪಿಯ 200 ಕೋಟಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು