ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ವಿಡಿಯೋ ಬಹಿರಂಗವಾದ ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆಯಂತೆ. ಹೈಕಮಾಂಡ್ ನಾಯಕರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂಲಕ ವಿವರಣೆ ಪಡೆದುಕೊಂಡಿದ್ದು, ಪಕ್ಷಕ್ಕಾಗುವ ಮುಜುಗರ ತಪ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.
ಬೆಳಗ್ಗೆಯೇ ನವದೆಹಲಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಮಾಡಿದ್ದರಂತೆ. ಪಂಚ ರಾಜ್ಯಗಳ ಚುನಾವಣೆ ಇದ್ದು, ರಾಜ್ಯದಲ್ಲಿ ಉಪ ಚುನಾವಣೆಗಳು ಬರಲಿವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಸಹ ಸನಿಹದಲ್ಲಿವೆ. ಈ ಸಂದರ್ಭದಲ್ಲಿ ಜಾರಕಿಹೊಳಿ ಪ್ರಕರಣವನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ಳಲು ಸಾಧ್ಯ? ಜನರ ಮುಂದೆ ಪಕ್ಷ ಮುಜುಗರಕ್ಕೆ ಸಿಲುಕಬೇಕಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ರಾಜೀನಾಮೆ ಪಡೆಯುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಸಂತೋಷ್ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ರಮೇಶ್ ಸಿಡಿ ಆರೋಪ ಪ್ರಕರಣ: ಸೈಲೆಂಟಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ರಾ ಸತೀಶ್ ಜಾರಕಿಹೊಳಿ?
ಸಂತೋಷ್ ಭೇಟಿ ನಂತರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರಂತೆ. ಸದ್ಯಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆದು ತನಿಖೆ ನಂತರ ಆರೋಪ ನಿರಾಧಾರ ಎಂದಾದಲ್ಲಿ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಅರುಣ್ ಸಿಂಗ್ ಜೊತೆ ಮಾತುಕತೆ ನಡೆದ ನಂತರ ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಜತೆಯೂ ಸಿಎಂ ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮನವೊಲಿಸಿ ರಾಜೀನಾಮೆ ಕೊಡಿಸಿ ಎನ್ನುವ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ.