ಬೆಂಗಳೂರು: ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಕೌನ್ಸಿಲ್ ಬ್ರೇಕ್ ಹಾಕಿದೆ. ವಿಧಾನ ಪರಿಷತ್ನಲ್ಲಿ ನಿಂತ ಗೋ ಹತ್ಯೆ ನಿಷೇಧ ವಿಧೇಯಕದ ಹಾದಿ ಸುಗಮಗೊಳಿಸಲು ಸರ್ಕಾರ ಮಾರ್ಗಗಳ ಹುಡುಕಾಟದಲ್ಲಿದೆ.
ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಅಜೆಂಡಾ ಗೋ ಹತ್ಯೆ ನಿಷೇಧ ವಿಧೇಯಕ. ತಮ್ಮ ಪ್ರಣಾಳಿಕೆಯಲ್ಲಿದ್ದ ಭರವಸೆಯನ್ನು ಈಡೇರಿಸುವುದು ಬಿಜೆಪಿ ಸರ್ಕಾರಕ್ಕೆ ಈ ಬಾರಿಯ ಅಧಿವೇಶನದಲ್ಲಿನ ಮೊದಲ ಆದ್ಯತೆಯಾಗಿತ್ತು. ಅದರಂತೆ ಸರ್ಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020ಗೆ ವಿಧಾನಸಭೆಯಲ್ಲಿ ಅಂಗೀಕಾರ ಗಿಟ್ಟಿಸಿಕೊಂಡಿತು. ಆದರೆ ವಿಧಾನ ಪರಿಷತ್ನಲ್ಲಿ ಸರ್ಕಾರದ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ತಡೆ ಬಿದ್ದಿದೆ. ವಿಧೇಯಕ ವಿಧಾನಪರಿಷತ್ನಲ್ಲಿ ಮಂಡನೇ ಆಗಲೇ ಇಲ್ಲ. ಇದರಿಂದ ವಿವಾದಿತ ಗೋ ಹತ್ಯೆ ನಿಷೇಧ ವಿಧೇಯಕ ಕಾಯ್ದೆಯಾಗಿ ಜಾರಿಯಾಗಲು ಬ್ರೇಕ್ ಬಿದ್ದಿದೆ. ಇದೀಗ ಗೋ ಹತ್ಯೆ ನಿಷೇಧ ವಿಧೇಯಕ ಕಾನೂನಾಗಿ ಜಾರಿಯಾಗಿಸಲು ಸರ್ಕಾರದ ಮುಂದಿರುವ ಆಯ್ಕೆಗಳ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.
ಪರಿಷತ್ನಲ್ಲಿ ಸರ್ಕಾರದ ಜಾಣ ನಡೆ:
ಬಿಜೆಪಿ ಸರ್ಕಾರಕ್ಕೆ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಕೌನ್ಸಿಲ್ ಅಡ್ಡಿ ಬಗ್ಗೆ ಮುಂಚಿತವಾಗಿನೇ ವಾಸನೆ ಹೊಡೆದಿತ್ತು. ಸಂಖ್ಯಾಬಲದ ಕೊರತೆ ಇದ್ದ ಸರ್ಕಾರಕ್ಕೆ ವಿಧೇಯಕ ಕೌನ್ಸಿಲ್ನಲ್ಲಿ ಪಾಸಾಗುವ ಬಗ್ಗೆ ಅನುಮಾನ ಇತ್ತು.
ಅದಕ್ಕಾಗಿಯೇ ಪರಿಷತ್ನಲ್ಲಿ ಸರ್ಕಾರ ಗೋಹತ್ಯೆ ಮಸೂದೆ ಮಂಡನೆಗೆ ಟ್ರಿಕ್ಸ್ ಮಾಡಿತ್ತು. ಮಸೂದೆ ಇವತ್ತೇ ಮಂಡಿಸಿದ್ರೆ ಬಿಲ್ ನೇಪಥ್ಯಕ್ಕೆ ಸರಿಯುವ ಭೀತಿ ಸರ್ಕಾರಕ್ಕೆ ಇತ್ತು. ವಿಧೇಯಕವನ್ನು ಮಂಡಿಸಿದರೆ, ಸಭಾಪತಿ ಅದನ್ನು ಸದನ ಸಮಿತಿಗೆ ವಹಿಸುವ ಆತಂಕ ಬಿಜೆಪಿಯನ್ನು ಕಾಡಿತ್ತು. ಒಂದು ವೇಳೆ ಜಂಟಿ ಸದನ ಸಮಿತಿಗೆ ವಹಿಸಿದರೆ ಮತ್ತೆ 6 ತಿಂಗಳು ಮುಂದೆ ಹೋಗುತ್ತೆ ಎಂಬ ಆತಂಕ ಎದುರಾಗಿತ್ತು.
ಹಾಗಾಗಿ ಗೋ ಹತ್ಯೆ ಮಸೂದೆಯನ್ನೇ ಪರಿಷತ್ನಲ್ಲಿ ಮಂಡಿಸದೇ ಇರುವುದು ಒಳಿತು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿತು. ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಮುಗಿದ ಬಳಿಕ ಪರಿಷತ್ನಲ್ಲಿ ಸರಾಗವಾಗಿ ಬಿಲ್ ಮಂಡಿಸಬಹುದೆಂಬ ಪ್ಲಾನ್ ಸರ್ಕಾರದ್ದಾಗಿದೆ. ಆ ಕಾರಣಕ್ಕಾಗಿ ವಿಧಾನಸಭೆಯಲ್ಲಿ ಅಂಗೀಕಾರವಾದ ಗೋಹತ್ಯೆ ನಿಷೇಧ ಮಸೂದೆ ಪರಿಷತ್ನಲ್ಲಿ ಮಂಡನೆ ಮಾಡುವ ಗೋಜಿಗೆ ಹೋಗಿಲ್ಲ.
ವಿಧೇಯಕದ ಸುಗಮ ಹಾದಿಗಿರುವ ಆಯ್ಕೆಗಳೇನು?
ವಿಧಾನ ಪರಿಷತ್ನಲ್ಲಿ ನಿಂತಿರುವ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಕಾಯ್ದೆ ರೂಪ ತರಲು ಸರ್ಕಾರ ಇದೀಗ ಪ್ಲಾನ್- ಬಿ ರೂಪಿಸಿದೆ. ಸರ್ಕಾರ ವಿಧಾನಪರಿಷತ್ ಕಲಾಪವನ್ನು ಮಂಗಳವಾರದ ವರೆಗೆ ನಡೆಸಲು ತೀರ್ಮಾನಿಸಿತ್ತು. ನಿನ್ನೆಯೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ದಿನ ನಿಗದಿ ಮಾಡಬೇಕಿತ್ತು. ಆದರೆ ಸಭಾಪತಿ ಹಠಾತ್ತಾಗಿ ಕಲಾಪ ಮುಂದೆ ಹಾಕಿದ್ದು ಬಿಜೆಪಿ ಪ್ಲಾನ್ ಉಲ್ಟಾ ಆಗುವಂತೆ ಮಾಡಿದೆ.
ಇದೀಗ ಸರ್ಕಾರ ಪರಿಷತ್ ಕಲಾಪವನ್ನು ಮಂಗಳವಾರದವರೆಗೆ ನಡೆಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಸಭಾಪತಿಗೆ ಪತ್ರ ಬರೆದು, ಮತ್ತೆ ಮಂಗಳವಾರದ ತನಕ ಕಲಾಪ ನಡೆಸಲು ವಿನಂತಿ ಮಾಡಲು ನಿರ್ಧರಿಸಿದೆ. ಈಗಾಗಲೇ ಡಿಸಿಎಂ ಲಕ್ಷ್ಮಣ ಸವದಿ, ಮಹಾಂತೇಶ ಕವಟಗಿಮಠ ರಾಜಭವನಕ್ಕೆ ಹೋಗಿ ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ. ಆ ಮೂಲಕ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಮುಂದಾಗಿದೆ ಸರ್ಕಾರ.
ಒಂದು ವೇಳೆ ಪರಿಷತ್ ಕಲಾಪ ಮಂಗಳವಾರದವರೆಗೆ ನಡೆಸಲು ಸಾಧ್ಯವಾಗಿಲ್ಲವಾದರೆ, ಸರ್ಕಾರ ಗೋ ಹತ್ಯೆ ನಿಷೇಧ ಕಾನೂನನ್ನು ತಕ್ಷಣಕ್ಕೆ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಯೋಚಿಸಿದೆ. ಮುಂದಿನ ಅಧಿವೇಶನದವರೆಗೆ ಕಾಯುವ ಬದಲು ಮುಂದಿನ ಸಂಪುಟ ಸಭೆಯಲ್ಲಿ ಗೋ ಹತ್ಯೆ ನಿಷೇಧ ಸಂಬಂಧ ಸುಗ್ರೀವಾಜ್ಞೆ ತರಲು ಯೋಜಿಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮುನ್ಸೂಚನೆ ನೀಡಿದ್ದಾರೆ.
ಮುಂದಿನ ಅಧಿವೇಶನದವರೆಗೆ ಸುಗ್ರೀವಾಜ್ಞೆ ಮೂಲಕ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುತ್ತದೆ. ಬಳಿಕ ಮುಂದಿನ ಅಧಿವೇಶನದಲ್ಲಿ ಹಾಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ, ಅವರನ್ನು ಕೆಳಗಿಳಿಸಿ, ತಮ್ಮ ಪಕ್ಷದ ಅಥವಾ ಒಮ್ಮತದ ಅಭ್ಯರ್ಥಿಯನ್ನು ಸಭಾಪತಿಯನ್ನಾಗಿ ಆಯ್ಕೆ ಮಾಡಲಿದೆ. ಬಳಿಕ ವಿಧಾನಸಭೆಯಲ್ಲಿ ಅಂಗೀಕೃತವಾದ ಗೋ ಹತ್ಯೆ ನಿಷೇಧ ವಿಧೇಯಕವನ್ನು ಪರಿಷತ್ನಲ್ಲಿ ಮಂಡಿಸಿ ಅಂಗೀಕಾರ ಪಡೆಯುವ ಇರಾದೆಯಲ್ಲಿ ಸರ್ಕಾರ ಇದೆ.