ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಬಿಜೆಪಿ ಮೇಲೆ ಕಾಂಗ್ರೆಸ್ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಒಂದು ವೇಳೆ ಅಕ್ರಮ ನಡೆದಿದ್ದಲ್ಲಿ ಚಿಲುಮೆ ಸಂಸ್ಥೆ ಮತ್ತು ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.
ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಆಯೋಗದ ಕಚೇರಿಗೆ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ವಿವಾದದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಕೆ ಮಾಡಿತು.
ಇದನ್ನೂ ಓದಿ: ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ, ಕೂಡಲೇ ಅವರು ರಾಜೀನಾಮೆ ಕೊಡಲಿ: ಎನ್.ರವಿಕುಮಾರ್
ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, 'ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದ್ದೇವೆ. ಚಿಲುಮೆ ಸಂಸ್ಥೆ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯದ ಜನತೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿತ್ತು. ಕಾಂಗ್ರೆಸ್ ತಪ್ಪು ಮಾಹಿತಿ ನೀಡಿ, ಚಿಲುಮೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಜವಾಬ್ದಾರಿಯನ್ನು ಬಿಜೆಪಿ ನೀಡಿತ್ತು ಎಂದಿತ್ತು. ಆದರೆ, 2017 ರಲ್ಲೇ ಹಿಂದಿನ ಸರ್ಕಾರ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಜವಾಬ್ದಾರಿ ನೀಡಿದೆ. ಅದರ ಮಾಹಿತಿ ನಾವು ಬಿಡುಗಡೆ ಮಾಡಿದ್ದೇವೆ. ಮತದಾರರ ಪಟ್ಟಿ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡಲಿದೆಯೇ ಹೊರತು ಸರ್ಕಾರ ಮತ್ತು ಪಕ್ಷ ಅಲ್ಲ' ಎಂದರು.
ಇದನ್ನೂ ಓದಿ: ಡೂಪ್ಲಿಕೇಟ್ ಮತ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಆರೋಪಿಸುತ್ತಿದೆ: ಸಿಎಂ ಬೊಮ್ಮಾಯಿ
'ಕರಡು ಪಟ್ಟಿ ಸಿದ್ಧವಾಗುವ ವೇಳೆ ನಾವೇ ಹೆಸರು ಕೈಬಿಟ್ಟಿದ್ದೇವೆ ಎಂದು ಚುನಾವಣಾ ಆಯೋಗ ಹೇಳಿದ್ದರೂ ಕೂಡ ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆಪಾದನೆ ಮಾಡುತ್ತಿದೆ. ತಪ್ಪಿಗೆ ಕಾರಣವಾದ ಕಾಂಗ್ರೆಸ್ಗೂ ಶಿಕ್ಷೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಪಟ್ಟಿ ಪರಿಷ್ಕರಣೆ ಮಾಡಿಲ್ಲ, ಮತದಾರರ ಪಟ್ಟಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಚಿಲುಮೆ ತಪ್ಪು ಮಾಡಿದ್ದರೆ, ಅಧಿಕಾರಿಗಳು ಶಾಮೀಲಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದರು.
ಇದನ್ನೂ ಓದಿ: ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ, ಕೂಡಲೇ ಅವರು ರಾಜೀನಾಮೆ ಕೊಡಲಿ: ಎನ್.ರವಿಕುಮಾರ್
'ಇನ್ನು ಚಿಲುಮೆ ಸಂಸ್ಥೆಗೆ ಬಿಜೆಪಿ ಶಾಸಕರು ಹಣ ಕೊಟ್ಟಿದ್ದಾರೆ ಎನ್ನುವ ಮಾಹಿತಿ ನನಗೆ ಇಲ್ಲ, ಹಾಗೆ ಕೊಟ್ಟಿದ್ದರೆ ಯಾಕೆ ಕೊಟ್ಟಿದ್ದಾರೆ ಎಂದು ಆಯೋಗ ತನಿಖೆ ನಡೆಸಲಿ' ಎಂದರು.