ಬೆಂಗಳೂರು: "ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ನವೆಂಬರ್ 3 ರಿಂದ 10ರ ವರೆಗೆ 17 ತಂಡಗಳಲ್ಲಿ ರಾಜ್ಯ ಬಿಜೆಪಿ ಬರ ಅಧ್ಯಯನ ಪ್ರವಾಸ ಮಾಡಲಿದ್ದು, ವರದಿ ಮೂಲಕ ಬರ ಪರಿಹಾರ ಕಾರ್ಯಾಚರಣೆಗೆ ಸರ್ಕಾರದ ಗಮನ ಸೆಳೆಯುತ್ತೇವೆ. ಸದನದಲ್ಲಿಯೂ ಚರ್ಚೆಗೆ ಅವಕಾಶ ಕೋರಲಿದ್ದೇವೆ" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ರಾಜ್ಯ ಬಿಜೆಪಿಯ ಬರ ಅಧ್ಯಯನಕ್ಕೆ ನಿಯೋಜನೆಗೊಂಡಿರುವ ತಂಡಗಳ ಕುರಿತು ಮಾಹಿತಿ ನೀಡಿದರು. "ರಾಜ್ಯಾದ್ಯಂತ ಬರ ತೀವ್ರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು, ಉತ್ತರ ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ಗುಳೆ ಹೋಗ್ತಿದ್ದಾರೆ. ಬೆಂಗಳೂರು, ಮುಂಬೈ ಸೇರಿ ಎಲ್ಲಿ ಉದ್ಯೋಗ ಸಿಗುತ್ತದೆಯೋ ಅಲ್ಲಿಗೆ ಗುಳೆ ಹೋಗ್ತಿದ್ದಾರೆ. ಆದರೆ ಸರ್ಕಾರ, ಸಿಎಂ, ಡಿಸಿಎಂ, ಸಚಿವರು ಡಿನ್ನರ್ ಪಾರ್ಟಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಬಿಜೆಪಿ 17 ತಂಡ ರಚಿಸಿದ್ದು, ಬರ ಅಧ್ಯಯನ ಪ್ರವಾಸ ನಡೆಸಲಿದೆ" ಎಂದು ಹೇಳಿದರು.
"ತಂಡಗಳು ನ.3 ರಿಂದ 10ರ ವರೆಗೆ ಬರ ಅಧ್ಯಯನ ಪ್ರವಾಸ ಮಾಡಲಿವೆ. ದನಕರುಗಳಿಗೆ ನೀರಿಲ್ಲದ ಸ್ಥಿತಿ ಇದೆ. ಪ್ರವಾಸದ ವೇಳೆ ಗೋಶಾಲೆಗಳು, ಎಪಿಎಂಸಿ ವಿಸಿಟ್ ಮಾಡಲಿದ್ದೇವೆ. ಕುಡಿಯುವ ನೀರಿಲ್ಲ, ವಿದ್ಯುತ್ ದರ ಹೆಚ್ಚಳವಾಗಿದೆ. ಇದರಿಂದ ಬಂದ್ ಆಗಿರೋ ಸಣ್ಣ ಕೈಗಾರಿಕೆ ವೀಕ್ಷಣೆ ಮಾಡಲಿದ್ದೇವೆ. ಬೋರ್ವೆಲ್ಗೆ ವಿದ್ಯುತ್ ಪೂರೈಕೆ ಆಗದಿರೋದರ ವೀಕ್ಷಣೆ ಮಾಡಲಿದ್ದೇವೆ" ಎಂದರು.
"ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಸಿ ಟಿ ರವಿ, ಶಾಸಕ ಅರವಿಂದ ಬೆಲ್ಲದ್, ಮಾಜಿ ಸಚಿವ ಬಿ ಶ್ರೀರಾಮುಲು, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಡಿಸಿಎಂ ಆರ್ ಅಶೋಕ್, ಮಾಜಿ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಿಎಂ ಡಿ.ವಿ ಸದಾನಂದಗೌಡ ಸೇರಿದಂತೆ ಅನೇಕರ ನೇತೃತ್ವದ ತಂಡಗಳು ಬರ ಪ್ರವಾಸ ಮಾಡಲಿವೆ. ಪ್ರತೀ ತಂಡ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಸ್ಥಿತಿಗತಿ ವೀಕ್ಷಣೆ ಮಾಡಲಿವೆ. ನಂತರ ಅಧ್ಯಯನ ವರದಿಯನ್ನ ಸರ್ಕಾರದ ಗಮನಕ್ಕೆ ತರಲಿದ್ದೇವೆ. ಮುಂಬರಲಿರುವ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಲಿದ್ದೇವೆ" ಎಂದು ತಿಳಿಸಿದರು.
"ಸರ್ಕಾರ ಇನ್ನೂ ಕಲೆಕ್ಷನ್ ನಿಲ್ಲಿಸಿಲ್ಲ. ವರ್ಗಾವಣೆ ದಂಧೆ ನಿಲ್ಲಿಸಿಲ್ಲ. ಕೆಇಎ ನಡೆಸುತ್ತಿರೋ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಕೆಲವೆಡೆ ಒಂದು ಗಂಟೆ ಹೆಚ್ಚುವರಿ ಪರೀಕ್ಷೆಗೆ ಅವಕಾಶ ನೀಡಿದ್ದಾರೆ. 9 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಆರ್.ಡಿ ಪಾಟೀಲ್ ಯಾಕೆ ಇನ್ನೂ ಬಂಧನ ಆಗಿಲ್ಲ. ಸರ್ಕಾರದ ಹಸ್ತಕ್ಷೇಪ ಇದರಲ್ಲಿ ಇದೆ. ಕೂಡಲೇ ಇದರ ತನಿಖೆ ನಡೆಸಬೇಕು. ಆರ್ ಡಿ ಪಾಟೀಲ್ ಬಂಧನ ಆಗಬೇಕೆಂದು ಒತ್ತಾಯಿಸಿ ಯಾದಗಿರಿ, ಕಲಬುರಗಿಯಲ್ಲಿ ಹೋರಾಟ ಮಾಡಲಾಗುವುದು. ಬುಧವಾರ ಪ್ರತಿಭಟನೆ ನಡೆಯಲಿದೆ" ಎಂದರು.
ಇದನ್ನೂ ಓದಿ: ಶೀಘ್ರವೇ ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿ: ರಮೇಶ್ ಜಾರಕಿಹೊಳಿ ಭವಿಷ್ಯ