ಬೆಂಗಳೂರು: ಆಡಳಿತ ವಿರೋಧಿ ಅಲೆ ಎನ್ನುವ ಪದವೇ ಈಗ ಬಿಜೆಪಿಗೆ ಇಲ್ಲ. ಅದರ ಪರಿಣಾಮವೂ ನಮ್ಮ ಪಕ್ಷಕ್ಕೆ ಅನ್ವಯವಾಗುವುದಿಲ್ಲ. ಮುಸಲ್ಮಾನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಭಾರತೀಯರು ಅಂದರೆ ಎಲ್ಲರೂ ಒಂದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮತಕ್ಕಾಗಿ ಅಲ್ಲ. ಸಮಾಜದ ದೃಷ್ಟಿಯಿಂದ ಒಂದಾಗಿ ಹೋಗಬೇಕು ಎಂದು ಮೋದಿ ಹೇಳಿದ್ದಾರೆ ಅಷ್ಟೇ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ ಅವರು ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತ ವಿರೋಧಿ ಅಲೆ ಎನ್ನುವ ಪದವೇ ಬಿಜೆಪಿಗೆ ಅನ್ವಯವಾಗುವುದಿಲ್ಲ. ಅದರ ಪರಿಣಾಮ ಬಿಜೆಪಿಗೆ ಅನ್ವಯವಾಗುವುದಿಲ್ಲ. ಇದು ಸಾಬೀತಾಗಿರುವ ಮಾದರಿಯಾಗಿದೆ. ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ಇದುವರೆಗೂ ಅದನ್ನು ಮಾಡಿ ತೋರಿಸಲಾಗಿದೆ. ಅದನ್ನು ಅನುಷ್ಠಾನ ಮಾಡಲಾಗಿದೆ. ತ್ರಿಪುರ, ನಾಗಾಲ್ಯಾಂಡ್, ಮಿಜೋರಾಮ್, ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಒಟ್ಟಾರೆ ಚುನಾವಣೆ ಎನ್ನುವುದು ಎಂದಿನ ಪ್ರಕ್ರಿಯೆ, 365 ದಿನ 24 ಗಂಟೆಯೂ ನಾವು ಆ ದಿಕ್ಕಿನಲ್ಲಿ ಕೆಲಸ ಮಾಡಲಿದ್ದೇವೆ. ಬಿಜೆಪಿ ಕಾರ್ಯಕರ್ತ, ಪ್ರತಿನಿಧಿ ಎಂದರೆ ಅದಕ್ಕೆ ಸಿದ್ದನಾಗಿರಬೇಕು ಎನ್ನುವ ಸಂದೇಶವನ್ನು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೊಡಲಾಗಿದೆ ಎಂದರು.
ಮುಸಲ್ಮಾನರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಹೆಚ್ಚು ಚರ್ಚಿತವಾಗುತ್ತಿದೆ. ನಮ್ಮದು ರಾಷ್ಟ್ರೀಯತೆ ಇರುವ ಪಕ್ಷ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಕೇವಲ ಮತಕ್ಕಾಗಿ ಅಲ್ಲ, ಎಲ್ಲರಿಗೂ ಎಲ್ಲಾ ಸಹಕಾರ ಕೊಡಬೇಕು. ಪ್ರೋತ್ಸಾಹ ಕೊಡಬೇಕು ಎನ್ನುವುದು ಇದರ ಉದ್ದೇಶ. ತುಷ್ಟೀಕರಣದ ರಾಜಕಾರಣವನ್ನು ಬಿಜೆಪಿ ಮಾಡಲ್ಲ. ಸ್ಪಷ್ಟತೆ ಇರುವ ಪಕ್ಷ ನಮ್ಮದು. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ನಮ್ಮ ಧ್ಯೇಯ. ಇದೆಲ್ಲಾ ನಾವು ಮತಕ್ಕಾಗಿ ಮಾಡುತ್ತಿಲ್ಲ. ಎಲ್ಲಾ ಧರ್ಮದ ವಿಚಾರದಲ್ಲಿ ಎಲ್ಲಾ ರಾಜ್ಯದಿಂದ ಬಂದವರ ಬಗ್ಗೆ ನಮಗೆ ಒಂದೇ ಅಬಿಪ್ರಾಯವಿದೆ. ಎಲ್ಲಿ ಸ್ಪಷ್ಟತೆ ಕೊಡಬೇಕೋ ಅಲ್ಲಿ ಸ್ಪಷ್ಟತೆ ಕೊಡುವ ಕೆಲಸ ಆಗಿದೆ. ಮೋದಿ ಇದನ್ನೇ ಮಾಡಿದ್ದಾರೆ ಅಷ್ಟೆ ಎಂದು ಹೇಳಿದರು.
ಈ ಬಾರಿಯ ಚುನಾವಣೆ ಅಲ್ಲ ಮತ್ತು ಹನುಮಾನ್ ನಡುವಿನ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥನಾರಾಯಣ್, ಮೋದಿ ಸಂದೇಶ ನೀಡಿದ ನಂತರ ಮುಗಿಯಿತು. ಇಲ್ಲಿ ಯಾರನ್ನು ದ್ವೇಷ ಮಾಡುವ ಉದ್ದೇಶವಿಲ್ಲ. ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತಾರೆ. ಸಮಾಜದಲ್ಲಿ ಜಿಹಾದಿಯನ್ನು ಆ ಕಾಲದಲ್ಲೇ ಮಾಡಲು ಹೊರಟಿದ್ದ ವ್ಯಕ್ತಿ ಟಿಪ್ಪು, ಆತ ನರಹಂತಕ, ಮತಾಂಧ. ಹಾಗಾಗಿಯೇ ನಾವು ಟಿಪ್ಪುವನ್ನು ವಿರೋಧಿಸುತ್ತೇವೆ.
ಹಾಗಂತ ಎಲ್ಲಾ ಮುಸಲ್ಮಾನರನ್ನೂ ನಾವು ಟಿಪ್ಪುಗೆ ಹೋಲಿಕೆ ಮಾಡಲು ಸಾಧ್ಯವೇ?. ಟಿಪ್ಪುನನ್ನು ವಿರೋಧಿಸುವ ನಾವು ಹೈದರಾಲಿಯನ್ನು ಮತಾಂಧ, ನರಹಂತಕ ಎಂದು ಕರೆಯುತ್ತೇವಾ? ಟಿಪ್ಪು ಮಾಡಿದ್ದ ಜಿಹಾದಿ ಬಗ್ಗೆ ಆರೋಪ ಮಾಡುತ್ತಿದ್ದೇವೆ. ಬಹುಸಂಖ್ಯಾತರ ವಿರುದ್ಧ ಕೊಟ್ಟ ಕಿರುಕುಳ ಇತಿಹಾಸದಲ್ಲಿ ಇನ್ನೊಂದು ತರಹ ತೋರುವ ಕೆಲಸ ಮಾಡುತ್ತಿದ್ದೇವೆ. ಟಿಪ್ಪು ಹೀರೋ ಅಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಬೇಕಿತ್ತು. ಇತಿಹಾಸದ ಘಟನೆಗಳನ್ನು ನೈಜವಾಗಿ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಮತಕ್ಕೆ ರಾಜಕಾರಣ ಮಾಡುತ್ತಿದೆ ಎಂದರು.
ಟಿಪ್ಪು ನಿಜಕನಸುಗಳ ನಾಟಕದಲ್ಲಿ ಎಲ್ಲವನ್ನೂ ತೋರಿಸಿದ್ದೇವೆ. ಸಲಾಂ ಆರತಿಯನ್ನು ನಂಜನಗೂಡಿನಲ್ಲಿ ತೆಗೆದಿದ್ದೇವೆ. ಆದರೆ, ಶೃಂಗೇರಿಯಲ್ಲಿ ನಡೆಯುತ್ತಿದೆ ಅದು. ಸರ್ಕಾರದ ವ್ಯಾಪ್ತಿಗೆ ಬರಲ್ಲ. ಖಾಸಗಿ ಮಠದಲ್ಲಿ ಆಗಿದ್ದನ್ನು ನಾವು ತೆಗೆಯಲು ಆಗಲ್ಲ. ಅದು ಆ ಮಠಕ್ಕೆ ಸಹಾಯಕ ಆಗಿದೆ ಎನ್ನುವ ಕಾರಣಕ್ಕೆ ಮಾಡುತ್ತಿದ್ದಾರೆ. ಅದನ್ನೂ ನಾವು ಹೇಳಿದ್ದೇವೆ. ಸತ್ಯ ಹೇಳಿದ್ದೇವೆ. ಟಿಪ್ಪು ನಿಜ ಕನಸಿನಲ್ಲಿ ಎಲ್ಲವನ್ನೂ ಹೇಳಲಾಗಿದೆ ಎಂದರು.
ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಚಟುವಟಿಕೆ ಮಾಡುತ್ತಿರುವ ವರದಿಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲ್ಲಿಕೆ ಮಾಡಿದರು. ನಮ್ಮಲ್ಲಿನ ಅಭಿಯಾನ, ಸಂಘಟನೆ ಕೆಲಸ, ಬೂತ್ ಮಟ್ಟದಲ್ಲಿನ ಸಂಘಟನೆ ಎಲ್ಲಾ ಯಾವ ರೀತಿ ಸಂಘಟನೆ ಬಲಿಷ್ಠ ಮಾಡಲು ಕೆಲಸ ಮಾಡುತ್ತಿರುವ ಕುರಿತು ವರದಿ ನೀಡಿದರು. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಪ್ರಗತಿಪರ ಕೆಲಸ, ಒಳ್ಳೊಳ್ಳೆಯ ಕೆಲಸ, ವಿದೇಶಿ ನೇರ ಹೂಡಿಕೆ, ವಿಶೇಷ ಆರ್ಥಿಕ ವಲಯ, ಕೈಗಾರಿಕಾ ಟೌನ್ ಶಿಪ್, ಕಂದಾಯ ಕಾಯ್ದೆಯಲ್ಲಿ ತಿದ್ದುಪಡಿ ತಂದಿರುವುದು. ಸ್ಟಾರ್ಟ್ ಅಪ್ಗಳಿಗೆ ಉತ್ತೇಜನ ನೀಡಿದ್ದು, ರೈತರ ಪರ ಕಾರ್ಯಗಳು ಸೇರಿ ಎಲ್ಲಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಕುರಿತು ವರದಿ ಸಲ್ಲಿಕೆ ಮಾಡಿದರು ಎಂದರು.
ಸಮಾನತೆಯ ಕಾರ್ಯಕ್ರಮ ಕೊಟ್ಟಿದ್ದೇವೆ: ದೇಶದ ಜನರು 2014 ರಲ್ಲಿ ಸ್ಥಿರ ಸರ್ಕಾರವನ್ನು ರಚಿಸಿ ದೇಶದಲ್ಲಿ ಸ್ಥಿರತೆ ಕೊಟ್ಟರು. ಇದರಿಂದಾಗಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ. ಇಲ್ಲದೇ ಇದ್ದಲ್ಲಿ ಮ್ಯೂಸಿಕಲ್ ಚೇರ್ ಸರ್ಕಸ್ ಆಗುತ್ತಿತ್ತು. ತಮ್ಮ ಮತದ ಹಕ್ಕಿನ ಮೂಲಕ ಜನರು ಸ್ಥಿರ ಸರ್ಕಾರ ರಚಿಸಿದ್ದಾರೆ. ಸದೃಢ ಭಾರತ ನಿರ್ಮಿಸಲು, ತುಷ್ಟೀಕರಣದ ರಾಜಕಾರಣ ದೂರ ಮಾಡಿ ಜನರ ಆಶಯದ ಆಡಳಿತ ನೀಡಲು ಅವಕಾಶ, ಜವಾಬ್ದಾರಿ ಕೊಟ್ಟಿದ್ದಾರೆ. ಹಲವಾರು ಪ್ರಮುಖ ಕಾರ್ಯಕ್ರಮ ಕೊಟ್ಟಿದ್ದೇವೆ, ಸಮಾನತೆಯ ಕಾರ್ಯಕ್ರಮ ಕೊಟ್ಟಿದ್ದೇವೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ: ಮೂಲಭೂತ ಸೌಕರ್ಯದಲ್ಲಿ ರಸ್ತೆ ನಿರ್ಮಾಣದಲ್ಲಿ ಪ್ರಗತಿಯಾಗಿದೆ. ರೈಲ್ವೆಯನ್ನು ಬಹಳ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಗುಣಮಟ್ಟ ಹೆಚ್ಚಳ ಮಾಡಿ, ಸಂಪೂರ್ಣ ಸುರಕ್ಷತಾ ಕ್ರಮ ತರಲಾಗುತ್ತಿದೆ. ವಿದ್ಯುತ್ ಮಾರ್ಗ ನಿರ್ಮಿಸಲಾಗುತ್ತಿದೆ. ವಂದೇ ಭಾರತ್ ಪ್ರಾರಂಭಿಸಲಾಗಿದೆ. ಭಾರತ್ ಮಾಲಾ ರಸ್ತೆ ನಿರ್ಮಾಣ, ಸಾಗರ್ ಮಾಲಾ, ಫ್ಲೈಟ್ ಕಾರಿಡಾರ್ ನಿರ್ಮಾಣವಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಸಾಯಿಲ್ ಕಾರ್ಡ್ ವಿತರಣೆ, ಆಹಾರ ಸಂಸ್ಕರಣೆಗೆ ಆಧ್ಯತೆ ನೀಡಿ ವ್ಯವಸಾಯ ಪ್ರಗತಿಪರ, ಪರಿಸರ ಪೂರಕವಾಗಿಸಲಾಗುತ್ತಿದೆ.
ಆಪ್ಟಿಕಲ್ ನೆಟ್ವರ್ಕ್ ಕಲ್ಪಿಸಿ ಡಿಜಿಟಲ್ಗೆ ಆಧ್ಯತೆ: ನ್ಯಾಯೋ ಯೂರಿಯಾ ಬಳಕೆ ಆರಂಭಿಸಿ ಭೂಮಿ ರಕ್ಷಣೆಗೆ ಮುಂದಾಗಿದ್ದೇವೆ. ಫಸಲ್ ಭೀಮಾ ಸೇರಿ ಹಲವು ಯೋಜನೆ, ಈ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ರೈತನಿಗೆ ಎಲ್ಲ ರೀತಿಯ ಸಹಾಯ ಮಾಡಲಾಗುತ್ತಿದೆ. ಪ್ರತಿಯೊಬ್ಬ ಮನೆಗೂ ವಿದ್ಯುತ್, ನೀರು ಸಂಪರ್ಕ ಕೊಡಲಾಗಿದೆ. 2.65 ಲಕ್ಷ ಆಪ್ಟಿಕಲ್ ನೆಟ್ವರ್ಕ್ ಕಲ್ಪಿಸಿ ಡಿಜಿಟಲ್ಗೆ ಆಧ್ಯತೆ ನೀಡಲಾಗಿದೆ. ಆರೋಗ್ಯ, ವ್ಯವಹಾರ ಡಿಜಿಟಲೀಕರಣಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಇದೆಲ್ಲಾ ಸ್ಥಿರವಾದ ಸರ್ಕಾರದ ಕಾರಣಕ್ಕೆ ಕೊಡಲು ಸಾಧ್ಯವಾಗಿದೆ ಎಂದರು.
ಮಹಿಳೆಯರ ಸ್ವಂತ ಉದ್ಯೋಗಕ್ಕೂ ಆಧ್ಯತೆ: ಸೌತ್ ಕೋರಿಯಾದಲ್ಲಿ ಶೇ.96 ಜನರು ಕೌಶಲ್ಯ ಕಲಿತಿದ್ದಾರೆ. ಇಲ್ಲಿ ಈಗ ನಾವು ಆರಂಭಿಸಿದ್ದೇವೆ. ಶಾಲಾ ಹಂತದಲ್ಲಿಯೇ ಕೌಶಲ್ಯ, ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಸ್ವಂತ ಉದ್ಯೋಗಕ್ಕೆ ಮುದ್ರಾ ಯೋಜನೆ ತರಲಾಗಿದೆ. ಮಹಿಳೆಯರ ಸ್ವಂತ ಉದ್ಯೋಗಕ್ಕೂ ಆಧ್ಯತೆ ನೀಡಲಾಗಿದೆ. ಯೋಗವನ್ನು ಇಡೀ ವಿಶ್ವಕ್ಕೆ ಕೊಂಡೊಯ್ದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಸಿರಿಧಾನ್ಯ ವರ್ಷ ಆಚರಣೆ ಮಾಡಲಾಗುತ್ತಿದೆ. ಇಡೀ ವಿಶ್ವಕ್ಕೆ ಒಳ್ಳೆಯ ದಾರಿ ತೋರಲಾಗಿದೆ. ಸಿರಿಧಾನ್ಯ ಬೆಳೆಯಲು, ಬಳಕೆ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ.
ಜಿ-20 ಶೃಂಗದ ಆಥಿತ್ಯ ವಹಿಸಿರುವ ಭಾರತ ನಾಲ್ಕು ಸಾವಿರ ಸ್ಥಳದಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ತರುವ ಮೂಲಕ ಜಾಗತಿಕವಾಗಿ ದೇಶವನ್ನು ಪರಿಚಯ ಮಾಡಲಾಗುತ್ತಿದೆ. ಸ್ಥಳೀಯ ವಿಷಯಗಳನ್ನು ಜಾಗತಿಕವಾಗಿ ತಿಳಿಸಲಾಗುತ್ತಿದೆ. 5 ಟ್ರಿಲಿಯನ್ ಡಾಲರ್ ಎಕಾನಮಿಯತ್ತ ಹೋಗುತ್ತಿದ್ದೇವೆ. ಜಿಎಸ್ಟಿ ಮೂಲಕ ತೆರಿಗೆ ಸರಳೀಕರಣ ಮಾಡಲಾಗಿದೆ. ಒಂದು ದೇಶ ಒಂದು ತೆರಿಗೆ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅಮೃತಕಾಲದಲ್ಲಿ ಬಿಜೆಪಿ ಬನಾದಿ ಹಾಕಿದೆ. ಮುಂದಿನ 25 ವರ್ಷ ದೇಶ ನಿರ್ಮಾಣದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಓದಿ : ಯಾದಗಿರಿ ಐತಿಹಾಸಿಕ, ಪಾರಂಪರಿಕ ಭೂಮಿ, ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ: ಕನ್ನಡದಲ್ಲಿ ಶುಭಕೋರಿದ ಮೋದಿ