ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಯ ಸಂಚಲನದಿಂದ ಬಿಜೆಪಿ ನಾಯಕರು ವಿಚಲಿತರಾಗಿದ್ದು, ರಾಜ್ಯದಲ್ಲಿ ಬಿಜೆಪಿ ಅಲೆ ಏಳುವಂತೆ ಮಾಡಲು ಚಿಂತನೆ ನಡೆಸಿದ್ದಾರೆ. ಹಾಲಿ ನಡೆಸಲುದ್ದೇಶಿಸಿದ್ದ ಸಮಾವೇಶಗಳನ್ನು ಬೃಹತ್ ಸಮಾವೇಶಗಳನ್ನಾಗಿ ಪರಿವರ್ತಿಸಲಿದ್ದು, ಪಾದಯಾತ್ರೆ ಉದ್ದಕ್ಕೂ ಬಿಜೆಪಿ ಅಲೆ ಎಬ್ಬಿಸುವ ಸಂಕಲ್ಪ ತೊಟ್ಟಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಳಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಪ್ರತಿ ಸಮಾವೇಶದ ಮೂಲಕ ಒಂದೊಂದು ಘೋಷಣೆ: ರಾಜ್ಯದಲ್ಲಿ ಭಾರತ್ ಜೋಡೋ ಪಾದಯಾತ್ರೆಗೆ ಸಿಗುತ್ತಿರುವ ಜನಬೆಂಬಲಕ್ಕೆ ಪ್ರತಿಯಾಗಿ ರಾಜ್ಯಾದ್ಯಂತ ಕೇಸರಿ ಹವಾ ಎಬ್ಬಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ರಾಜ್ಯದ ಏಳು ಮಹಾನಗರಗಳಲ್ಲಿ ನಡೆಸಲುದ್ದೇಶಿಸಿರುವ ಸಮಾವೇಶಗಳನ್ನು ಬೃಹತ್ ಸಮಾವೇಶಗಳನ್ನಾಗಿ ಪರಿವರ್ತಿಸುತ್ತಿದ್ದು, 5 ಲಕ್ಷಕ್ಕೂ ಹೆಚ್ಚಿನ ಜನರನ್ನು ಸೇರಿಸಿ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಎನ್ನುವ ಸಂದೇಶವನ್ನು ಸಾರಲು ನಿರ್ಧರಿಸಿದ್ದಾರೆ. ಪ್ರತಿ ಸಮಾವೇಶದ ಮೂಲಕವೂ ಒಂದೊಂದು ಘೋಷಣೆಗಳನ್ನು ಮಾಡಲು ನಿರ್ಧರಿಸಲಾಗಿದೆ.
ಕಲಬುರಗಿಯಲ್ಲಿ ಅಕ್ಟೋಬರ್ 30 ರಂದು ಒಬಿಸಿ ಮೋರ್ಚಾದಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು, ಒಬಿಸಿ ಸಮುದಾಯಕ್ಕೆ ಸೇರಿದಂತೆ ಯಾವುದಾದರೂ ಯೋಜನೆ ಘೋಷಣೆ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಆದರೆ ಯಾವ ಯೋಜನೆ ಎನ್ನುವುದನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದ್ದು, ಅದೇ ರೀತಿ ಬಳ್ಳಾರಿಯಲ್ಲಿ ಏಳನೇ ಸಮಾವೇಶ ನಡೆಯಲಿದ್ದು, ಎಸ್ಟಿ ಮೀಸಲಾತಿ ಕುರಿತು ಮಹತ್ವದ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ರೈತ ಮೋರ್ಚಾ, ಎಸ್ಸಿ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಯುವ ಮೋರ್ಚಾ, ಮಹಿಳಾ ಮೋರ್ಚಾ ಸಮಾವೇಶಗಳನ್ನು ನಡೆಸಿ ಆಯಾ ವರ್ಗಕ್ಕೆ ಸೇರಿದ ಯೋಜನೆಗಳ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಬಿಬಿಸಿ ಮೀಸಲಾತಿ, ಎಸ್ಸಿ ಮೀಸಲಾತಿ, ಎಸ್ಟಿ ಮೀಸಲಾತಿ ಕುರಿತು ಸಮಾವೇಶಗಳನ್ನು ಮಹತ್ವದ ಘೋಷಣೆಯಾಗುವ ಸಾಧ್ಯತೆ ಇದೆ. ಅದೇ ರೀತಿ ರೈತರಿಗೆ ಪೂರಕವಾಗಿ ನೀರಾವರಿ ಯೋಜನೆಗಳ ಘೋಷಣೆ, ಯುವ ಸಮೂಹಕ್ಕೆ ಸೇರಿದಂತೆ ಉದ್ಯೋಗದ ಘೋಷಣೆ, ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
104 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ: ಇನ್ನು ಎರಡು ತಂಡಗಳು 104 ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಇಡೀ ಸರ್ಕಾರವೇ ಬಹುತೇಕ ಪ್ರವಾಸದಲ್ಲಿ ತೊಡಗಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳು ಜನರ ಬಾಗಿಲಿಗೆ ತಲುಪುತ್ತಿರುವ ಮಾಹಿತಿಯನ್ನು ಪ್ರವಾಸದುದ್ದಕ್ಕೂ ಪ್ರಚಾರ ಮಾಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಪರ ಅಲೆಯನ್ನು ಸೃಷ್ಟಿಸಲು ಚಿಂತನೆ ನಡೆಸಲಾಗಿದೆ. ಈ ಮೊದಲು ಕೇವಲ ಸಮಾವೇಶಗಳಿಗೆ ಮಾತ್ರ ರಾಷ್ಟ್ರೀಯ ನಾಯಕರನ್ನು ಕರೆಸಲುದ್ದೇಶಿಸಿದ್ದ ಬಿಜೆಪಿ ಇದೀಗ ಕ್ಷೇತ್ರಗಳ ಪ್ರವಾಸದ ವೇಳೆಯಲ್ಲಿಯೂ ರಾಷ್ಟ್ರೀಯ ನಾಯಕರನ್ನು ಕರೆಸಿ ರಾಜ್ಯದಲ್ಲಿ ಕೇಸರಿ ಸಂಚಲನ ಸೃಷ್ಟಿಗೆ ಬಿಜೆಪಿ ತಂತ್ರ ರೂಪಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ 40 ಪರ್ಸೆಂಟ್ ವಿಷಯವೇ ಪ್ರಮುಖವಾಗಿ ಬಳಸಿಕೊಳ್ಳುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಭ್ರಷ್ಟಾಚಾರ, ಬಿಜೆಪಿ ಸಾಧನೆ ಪ್ರಸ್ತಾಪಿಸಿ ರಾಜ್ಯಾದ್ಯಂತ ಬಿಜೆಪಿ ಪರ ಚರ್ಚೆ ಹುಟ್ಟುಹಾಕುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ಹಲವು ಸುತ್ತಿನ ಸಭೆಗಳನ್ನು ಬಿಜೆಪಿ ನಾಯಕರು ನಡೆಸಿದ್ದು, ದಸರಾ ಹಬ್ಬ ಮುಗಿಯುತ್ತಿದ್ದಂತೆ ಪ್ರಚಾರದ ಅಖಾಡಕ್ಕೆ ಬಿಜೆಪಿ ನಾಯಕರು ದುಮುಖಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಈವರೆಗೆ ಸಿಬಿಐ ಸರಿಯಿಲ್ಲ ಅಂತಿದ್ದ ಕಾಂಗ್ರೆಸ್ ಈಗ ಮೇಸ್ತ ವಿಚಾರದಲ್ಲಿ ಸರಿ ಅಂತಿದೆ: ತೇಜಸ್ವಿ ಸೂರ್ಯ ಕಿಡಿ