ಬೆಂಗಳೂರು : ಲೋಕಸಭೆ ಚುನಾವಣೆ ಹಾಗೂ ಪಕ್ಷದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚಿಸುವ ಸಂಬಂಧ ಇಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಆರಂಭಗೊಂಡಿದೆ.
ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯದ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಅವರು ಭಾಗವಹಿಸಿದ್ದಾರೆ.
ಪಕ್ಷ ಸಂಘಟನೆ, ಎಸ್ಟಿ ಸೋಮಶೇಖರ್ ಪಕ್ಷ ಬಿಡುವ ವಿಚಾರ, ಬಿಜೆಪಿಯಲ್ಲಿ ನಡೆಯುತ್ತಿರುವ ಗೊಂದಲ ಹಾಗೂ ಲೋಕಸಭೆ ಚುನಾವಣೆಗೆ ಸಿದ್ಧತೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇತ್ತಿಚೇಗೆ ಡಿವಿ ಸದಾನಂದಗೌಡ ಹೇಳಿದ್ದು ಹೀಗೆ: ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಡಿವಿ ಸದಾನಂದಗೌಡ ಅವರು ಕಿಡಿಕಾರಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದ್ದರು.
ತಮ್ಮಲ್ಲಿರುವ ಗೊಂದಲ ಮುಚ್ಚಿಕೊಳ್ಳಲು ಹಾರಿಕೆ ಸುದ್ದಿ ಹರಡ್ತಿದಾರೆ. ಮೂರೇ ತಿಂಗಳಲ್ಲಿ ಕಾಂಗ್ರೆಸ್ನವರ ಕಪಟ ನಾಟಕ ಜನರಿಗೆ ಗೊತ್ತಾಗಿದೆ. ಅವರು ಭರವಸೆ ಈಡೇರಿಸಿಲ್ಲ. ಅವರ ಶಾಸಕರನ್ನು ಸಮಾಧಾನ ಮಾಡಲು ಆಗಿಲ್ಲ ಎಂದು ಹೇಳಿದ್ದರು.
ಇನ್ನು ಆ ಪ್ರಕ್ರಿಯೆ ಶುರುವಾಗಿಲ್ಲ: ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಯಾರಿಗೆ ಟಿಕೆಟ್ ಅಂತ ಇನ್ನೂ ನಮ್ಮಲ್ಲಿ ಪ್ರಕ್ರಿಯೆ ಶುರುವಾಗಿಲ್ಲ. ಆದರೆ ಇದರ ಬಗ್ಗೆ ಆಗಲೇ ಮಾಧ್ಯಮಗಳಲ್ಲಿ ಏನೇನೋ ಬರ್ತಿದೆ. ನಮ್ಮ ವರಿಷ್ಠರು ಪಂಚ ರಾಜ್ಯಗಳ ಚುನಾವಣೆ ತಯಾರಿಯಲ್ಲಿದ್ದಾರೆ. ಇದಾದ ನಂತರ ಲೋಕಸಭೆ ಚುನಾವಣೆ ಕಡೆ ಗಮನ ಕೊಡ್ತಾರೆ ಎಂದು ಹೇಳಿದರು.
ಅದು ಹಾರಿಕೆ ಸುದ್ದಿಯಷ್ಟೇ: ಮಾಜಿ ಸಚಿವ ಎಸ್ಟಿ ಸೋಮಶೇಖರ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾರಿಕೆಯ ಸುದ್ದಿ ಹರಡುತ್ತಿರುವುದು ಕಾಂಗ್ರೆಸ್ನವರದ್ದು. ದೊಡ್ಡ ರೀತಿಯಲ್ಲಿ ನಮ್ಮಲ್ಲೇ ವಿಭಜನೆ ಆಗಬಹುದು ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳುತ್ತಿದ್ದರು. ಕಾಂಗ್ರೆಸ್ನವರು ಬ್ರಿಟೀಷರ ಕಾಲದಲ್ಲಿ ಅದೇ ಮಾಡುತ್ತಿದ್ದರು. ಈಗ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಓದಿ: ನಾವು ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಯಾರೆಂಬುದು ಚುನಾಯಿತ ಸಂಸದರು ನಿರ್ಧರಿಸುತ್ತಾರೆ: ಪಿಎಲ್ ಪುನಿಯಾ