ಬೆಂಗಳೂರು: ಕಾಂಗ್ರೆಸ್‍ನಿಂದ ವಿವಿಧ ಗ್ಯಾರಂಟಿ ಘೋಷಣೆಗಳನ್ನು ಜನರಿಗೆ ತಿಳಿಸುವ ವೇಳೆ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಮತದಾರರ ಡಾಟಾ (ಮಾಹಿತಿ) ಸಂಗ್ರಹ ಮಾಡುತ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ ನಂಬರ್ಗಳನ್ನು ಕೂಡ ಸಂಗ್ರಹಿಸುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಕೂಡಲೇ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದೆ.
ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಿಯೋಗ ಕಾಂಗ್ರೆಸ್ ಕಾರ್ಯಕರ್ತರಿಂದ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಕೆ ಮಾಡಿತು. ದೂರು ಸಲ್ಲಿಕೆ ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಮತದಾರರ ಮನೆಗಳಿಗೆ ತೆರಳುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಮತದಾರರ ವೈಯಕ್ತಿಕ ದಾಖಲೆ ಮತ್ತು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತಿದೆ. ಕಾಂಗ್ರೆಸ್‍ನಿಂದ ಗ್ಯಾರಂಟಿ ಕಾರ್ಡ್ ವಿತರಣೆ ವೇಳೆ ಅಕ್ರಮವಾಗಿ ಮಾಹಿತಿ ಸಂಗ್ರಹ ಕುರಿತಂತೆ ರಾಜ್ಯದ ಚುನಾವಣಾ ಅಧಿಕಾರಿಗಳಿಗೆ ದೂರು ಕೊಡಲಾಗಿದೆ ಎಂದು ಅವರು ವಿವರ ನೀಡಿದರು.
ರಾಹುಲ್ ಗಾಂಧಿ ಇಂದು ನಾಲ್ಕನೇ ಗ್ಯಾರಂಟಿ ಯೋಜನೆ ಎಂದು ಘೋಷಣೆ ಮಾಡಿದ್ದಾರೆ. ಇವರಿಗೆ ಬೇರೆ ರಾಜ್ಯಗಳಲ್ಲಿ ಇದನ್ನು ಮಾಡಲಿಕ್ಕೆ ಆಗಿಲ್ಲ. ಚುನಾವಣೆ ಪೂರ್ವದಲ್ಲಿ ಬಂದು ಸುಳ್ಳು ಆಶ್ವಾಸನೆ ಕೊಡ್ತಿದ್ದಾರೆ. ಅದಕ್ಕಾಗಿ ಇದರ ಬಗ್ಗೆ ಕ್ರಮ ಆಗಬೇಕೆಂದು ಚುನಾವಣಾ ಆಯುಕ್ತರಿಗೆ ದೂರು ಕೊಟ್ಟಿದ್ದೇವೆ. ಆಯುಕ್ತರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಉಚಿತ ಯೋಜನೆ ಆಮಿಷ ಒಡ್ಡುವ ಕೆಲಸ: ಕಾಂಗ್ರೆಸ್‍ನಿಂದ ವಿವಿಧ ಗ್ಯಾರಂಟಿ ಘೋಷಣೆಗಳನ್ನು ಜನರಿಗೆ ತಿಳಿಸುವ ವೇಳೆ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಮತದಾರರ ಡಾಟಾ (ಮಾಹಿತಿ) ಸಂಗ್ರಹ ಮಾಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮುಖಂಡ ಸಿದ್ದರಾಮಯ್ಯರ ನಿರ್ದೇಶನದ ಮೇರೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಕೆಲವು ಉಚಿತ ಯೋಜನೆಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಉಚಿತ ಯೋಜನೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಮತದಾರರ ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪಾಕ್ ಸಂಗ್ರಹಿಸುತ್ತಿದ್ದಾರೆ. ಇಂಥ ಅಕ್ರಮ ಹಲವೆಡೆ ನಡೆಯುತ್ತಿದೆ ಎಂದು ವಿವರಿಸಲಾಯಿತು ಎಂದರು.
ಮತದಾರರಿಗೆ ಹಣದ ಆಮಿಷ ಒಡ್ಡಲು ಸಂಚು: ಫೋನ್ ಪೇ, ಗೂಗಲ್ ಪೇ ನಂಬರ್ಗಳನ್ನು ಕೂಡ ಸಂಗ್ರಹಿಸುತ್ತಿದ್ದು, ಇದು ಅಪಾಯಕಾರಿ ಎಂದು ತಿಳಿಸಲಾಯಿತು. ಮತದಾರರ ವೈಯಕ್ತಿಕ ವಿವರಗಳನ್ನು ಕೇಳಲು ಯಾರಿಗೂ ಹಕ್ಕು ಇರುವುದಿಲ್ಲ ಎಂದು ಮನವಿ ಮೂಲಕ ಗಮನ ಸೆಳೆಯಲಾಯಿತು. ಚುನಾವಣೆ ಸಂದರ್ಭದಲ್ಲಿ ಮತ ಸೆಳೆಯಲು ಅಕ್ರಮವಾಗಿ ಮತದಾರರಿಗೆ ಹಣದ ಆಮಿಷವೊಡ್ಡಲು ಸಂಚು ರೂಪಿಸಿದ್ದಾರೆ ಎಂದು ಆಕ್ಷೇಪಿಸಲಾಯಿತು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ನಾರಾಯಣ್, ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಅವರ ನೇತೃತ್ವದ ನಿಯೋಗದಿಂದ ಇಂದು ದೂರು ಸಲ್ಲಿಸಲಾಯಿತು. ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಮತ್ತು ಪದಾಧಿಕಾರಿಗಳು ಇದ್ದರು.
ಇದನ್ನೂ ಓದಿ : ಚುನಾವಣೆ ಬಂದಾಗ ಬೋಗಸ್ ಕಾರ್ಡ್ ಸರಣಿ ಆರಂಭ: ಕಾಂಗ್ರೆಸ್ ವಿರುದ್ಧ ಸಿಎಂ ಗರಂ