ಬೆಂಗಳೂರು: ಮತದಾನದ ವೇಳೆ ಕಾಂಗ್ರೆಸ್ ಶಾಸಕ ಡಾ. ಅಜಯ್ ಸಿಂಗ್ ಶಿವಾಜಿನಗರದಲ್ಲಿ ಮತಯಾಚನೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.
ಬಿಜೆಪಿ ಚುನಾವಣಾ ವಿಭಾಗದ ಸಂಚಾಲಕ ದತ್ತಗುರು ಹೆಗಡೆ, ಕಾನೂನು ವಿಭಾಗದ ಹರ್ಷ ಮುತಾಲಿಕ್, ಸಂಚಾಲಕ ವಿವೇಕ್ ರೆಡ್ಡಿ ನೇತೃತ್ವದ ನಿಯೋಗ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿತ್ತು. ಈ ವೇಳೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ವಿರುದ್ಧ ದೂರು ಸಲ್ಲಿಸಿದೆ.
ಶಿವಾಜಿನಗರ ಕ್ಷೇತ್ರದಲ್ಲಿ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ನೀತಿ ಸಂಹಿತೆ ಉಲ್ಲಂಘಿಸಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ. ಹಾಗಾಗಿ ಅಜಯ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.