ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಸುನೀಲ್ ವಲ್ಯಾಪುರೆ ಹಾಗೂ ಪ್ರತಾಪ್ ಸಿಂಹ ನಾಯಕ್ ತಮ್ಮ ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ.
ಸುನೀಲ್ ವಲ್ಯಾಪುರೆ ಆಸ್ತಿ : ಹಿರಿಯ ನಾಯಕ ಸುನೀಲ್ ವಲ್ಯಾಪುರೆ ಒಟ್ಟು 20.02 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಸುನೀಲ್ ಅವರ ಹೆಸರಲ್ಲಿ 2.50 ಲಕ್ಷ ರೂ. ನಗದು, ಪತ್ನಿ ವಿಜಯಲಕ್ಷ್ಮಿ ಬಳಿ 2 ಲಕ್ಷ ರೂ. ನಗದು ಇದೆ. ಸುನೀಲ್ ಹೆಸರಲ್ಲಿ 18.03 ಕೋಟಿ ರೂ. ಆಸ್ತಿ ಇದ್ದು, ಪತ್ನಿ ಹೆಸರಲ್ಲಿ 1.98 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಸುನೀಲ್ ಹೆಸರಲ್ಲಿ 1.44 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 16.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 60.43 ಲಕ್ಷ ರೂ. ಮತ್ತು 1.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಸುನೀಲ್ ಅವರಿಗೆ 20.48 ಲಕ್ಷ ರೂ. ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ಅಲ್ಲದೇ, ಸುನೀಲ್ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನ, 48.860 ರೂ. ಮೌಲ್ಯದ 1 ಕೆಜಿ ಬೆಳ್ಳಿ ಇದೆ. ಪತ್ನಿ ವಿಜಯಲಕ್ಷ್ಮಿ ಬಳಿ 26.76 ಲಕ್ಷ ರೂ. ಮೌಲ್ಯದ 550 ಗ್ರಾಂ ಚಿನ್ನ, 48 ಸಾವಿರ ರೂ. ಮೌಲ್ಯದ 1 ಕೆಜಿ ಬೆಳ್ಳಿ ಇದೆ ಎಂದು ಮಾಹಿತಿ ನೀಡಲಾಗಿದೆ.
ಪ್ರತಾಪ್ ಸಿಂಹ ನಾಯಕ್ ಆಸ್ತಿ : ಇನ್ನು ಪಕ್ಷ ನಿಷ್ಠೆಯ ಕಾರಣದಿಂದ ಅಚ್ಚರಿ ಆಯ್ಕೆಯಾಗಿರುವ ಪಕ್ಷದ ಹಿರಿಯ ಕಾರ್ಯಕರ್ತ ಪ್ರತಾಪ್ ಸಿಂಹ ನಾಯಕ್ 2.29 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.
ಪ್ರತಾಪ್ ಸಿಂಹ ಅವರ ಬಳಿ 45.53 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 1.31 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಜ್ಯೋತಿ ನಾಯಕ್ ಹೆಸರಲ್ಲಿ 52.36 ಲಕ್ಷ ರೂ. ಮೌಲ್ಯದ ಚರಾಸ್ತಿ ಮಾತ್ರ ಇದ್ದು, ಯಾವುದೆ ಸ್ಥಿರಾಸ್ತಿ ಇಲ್ಲ. ಪುತ್ರಿ ಅನುಪಮಾ ನಾಯಕ್ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ಪ್ರತಾಪ್ ಸಿಂಹ ಅವರ ಬಳಿ 40 ಸಾವಿರ ರೂ. ನಗದು ಮತ್ತು ಪತ್ನಿ ಬಳಿ 5 ಸಾವಿರ ರೂ. ನಗದು ಇದೆ. ಪತ್ನಿ ಬಳಿ 15 ಲಕ್ಷ ರೂ. ಮೌಲ್ಯದ ಚಿನ್ನ ಇದೆ. ಪ್ರತಾಪ್ ಸಿಂಹ ಬಳಿ ಯಾವುದೇ ಚಿನ್ನ ಇಲ್ಲ ಹಾಗೂ ಸಾಲವೂ ಇಲ್ಲ ಎಂದು ತಿಳಿಸಿದ್ದಾರೆ.