ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಸಂಕಲ್ಪ ತೊಟ್ಟಿರುವ ರಾಜ್ಯ ಬಿಜೆಪಿ ನಾಯಕರು, ಗಣ್ಯರು, ಸೆಲೆಬ್ರೆಟಿಗಳ ಮನೆಗಳಿಗೆ ತೆರಳಿ ಧ್ವಜ ನೀಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡುತ್ತಿದ್ದಾರೆ. ಜೆ ಪಿ ನಗರದಲ್ಲಿರುವ ನಟ ಕಿಚ್ಚ ಸುದೀಪ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಭೇಟಿ ನೀಡಿ, ತ್ರಿವರ್ಣ ಧ್ವಜ ನೀಡುವ ಮೂಲಕ ಅಭಿಯಾನಕ್ಕೆ ಆಹ್ವಾನಿಸಿದೆ.
ಆಗಸ್ಟ್ 13 ರಿಂದ 15ರವರೆಗೆ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಆಯೋಜಿಸಲಾಗಿದೆ. ನಿಮ್ಮ ನಿವಾಸದಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ. ಬಿಜೆಪಿ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುದೀಪ್, ಗೌರವಪೂರ್ವಕವಾಗಿ ರಾಷ್ಟ್ರಧ್ವಜ ಸ್ವೀಕರಿಸಿದರು. ತಮ್ಮ ನಿವಾಸದಲ್ಲಿಯೂ ರಾಷ್ಟ್ರ ಧ್ವಜಾರೋಹಣ ಮಾಡುವ ಭರವಸೆ ನೀಡಿದರು.
ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಸಾಧನೆಯ ಹೊತ್ತಿಗೆಯನ್ನು ಸಾಹಿತಿಗಳ ಮನೆ, ಗಣ್ಯರ ನಿವಾಸಗಳಿಗೆ ಭೇಟಿ ನೀಡಿ ಅವರಿಗೆ ಕೃತಿಗಳನ್ನು ನೀಡಿ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ಸಿಗೆ ಧ್ವಜ ತಲುಪಿಸಲಾಗುತ್ತಿದೆ.
ಈ ಬಾರಿ ತಿರಂಗಾ ಅಭಿಯಾನ ಸಫಲಗೊಳಿಸಲು ನೂತನವಾಗಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ರಾಜೇಶ್ ಕುಂತೂರ್ ವಿಶೇಷ ಆಸಕ್ತಿ ವಹಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ಅವರಿಗೆ ಸಿಕ್ಕಿರುವ ಮೊದಲ ಸಂಘಟನಾತ್ಮಕ ಟಾಸ್ಕ್ ಈ ಅಭಿಯಾನವಾಗಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ದೊಡ್ಡಮಟ್ಟದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಭರ್ಜರಿ ತಿರಂಗ ತಯಾರಿ