ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಸದಸ್ಯ ಮಾಡಿದ್ದ ಬಿಟ್ ಕಾಯಿನ್ ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಾಗೂ ಈ ಕುರಿತ ನ್ಯಾಯಾಲಯವು ವಿಚಾರಣೆ ರದ್ದುಪಡಿಸುವಂತೆ ಕೋರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಜು.19ಕ್ಕೆ ಹೈಕೋರ್ಟ್ ಮುಂದೂಡಿದೆ.
ಹಗರಣದ ಆರೋಪಿಗಳಾಗಿರುವ ಬೆಂಗಳೂರಿನ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ ಶೆಟ್ಟಿ ಹಾಗೂ ಹೇಮಂತ್ ಮುದ್ದಪ್ಪ ಎಂಬುವರು ಸಲ್ಲಿಸಿದ್ದ ಪ್ರತ್ಯೇಕ ಮೂರು ಅರ್ಜಿಗಳನ್ನು ಗುರುವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆ ನಡೆಸಿತು.
ಅರ್ಜಿ ವಿಚಾರಣೆ ಸೆ.19ಕ್ಕೆ ಮುಂದೂಡಿಕೆ: ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ರಾಜ್ಯ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಹಾಜರಾಗಿ, 2022ರ ಸೆ.7ರಂದು ಸುನೀಶ್ ಹೆಗ್ಡೆ ಮತ್ತು ಪ್ರಸಿದ್ ಶೆಟ್ಟಿ ಅವರ ಅರ್ಜಿ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಅಂದು ಸಿಬಿಐ ಪರ ವಕೀಲರು ಮಾಡಿದ ಮನವಿ ಮೇರೆಗೆ ಅರ್ಜಿಯನ್ನು ಸೆ.19ಕ್ಕೆ ಮುಂದೂಡಿ ಆದೇಶಿಸಿತ್ತು.
ಅದರಲ್ಲಿ ಅರ್ಜಿ ಸಂಬಂಧ ಹಿಂದೆ ನೀಡಿರುವ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆಗೆ ವಿಸ್ತರಿಸಲಾಗಿದೆ ಎಂಬ ಸಾಲು ಉಲ್ಲೇಖಿಸಲಾಗಿದೆ. ಆದರೆ, ಅದಕ್ಕೂ ಹಿಂದೆ ಯಾವುದೇ ಮಧ್ಯಂತರ ಆದೇಶ ಮಾಡಿರಲಿಲ್ಲ. ತಪ್ಪಾಗಿ ಮಧ್ಯಂತರ ಆದೇಶ ವಿಸ್ತರಣೆ ಸಾಲು ನಮೂದಿಸಿದ್ದು, ಅದನ್ನು ತೆಗೆದುಹಾಕಬೇಕು ಎಂದು ಕೋರಿದರು. ಆ ಮನವಿ ಪುರಸ್ಕರಿಸಿದ ನ್ಯಾಯಪೀಠ, ಎಲ್ಲ ಅರ್ಜಿಗಳ ವಿಚಾರಣೆಯನ್ನು ಜು.19ರಂದು ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಬಿಟ್ ಕಾಯಿನ್ ಹಗರಣದ ಸಂಬಂಧ 2020ರ ನ.27ರಂದು ಸಿಸಿಬಿ ಇನಸ್ಪೆಕ್ಟರ್ ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ, ಅಪರಾಧಿಕ ಒಳಸಂಚು, ಪೋರ್ಜರಿ, ವಂಚನೆ, ವಸೂಲಿ ಮತ್ತು ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಆಕ್ಷೇಪಾರ್ಹ ಮಾಹಿತಿ ರವಾನಿಸಿರುವುದು ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ದೂರು ದಾಖಲಿಸಿದ್ದರು. ನಂತರ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
2021ರ ಫೆ.22ರಂದು ಸಿಸಿಬಿ ಪೊಲೀಸರು ಆರು ಆರೋಪಿಗಳ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶ್ರೀಕಿ ಮೊದಲನೇ ಆರೋಪಿಯಾದರೆ, ಸುನೀಶ್ ಹೆಗ್ಡೆ ಮತ್ತು ಪ್ರಸಿದ್ ಶೆಟ್ಟಿ ಹಾಗೂ ಹೇಮಂತ್ ಮುದ್ದಪ್ಪ ಇತರೆ ಆರೋಪಿಗಳಾಗಿದ್ದಾರೆ. ಪ್ರಕರಣವು ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್, ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಆರೋಪಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅಲ್ಲದೆ, ತಮ್ಮ ವಿರುದ್ಧ ಯಾವ ಕಾರಣಕ್ಕಾಗಿ ಪ್ರಕರಣದ ದಾಖಲಿಸಲಾಗಿದೆ ಎಂಬ ಬಗ್ಗೆ ದೂರಿನಲ್ಲಿ ವಿವರಿಸಿಲ್ಲ. ಅಪರಾಧ ಕೃತ್ಯ ನಡೆದು ಎರಡು ವರ್ಷಗಳ ಬಳಿಕ ದೂರು ದಾಖಲಾಗಿದೆ. ದೂರು ದಾಖಲಿಸಿದ್ದ ಸಿಸಿಬಿ ಇನಸ್ಪೆಕ್ಟರ್ ಪ್ರಕರಣದಲ್ಲಿ ಬಾದಿತರಲ್ಲ. ಹಾಗಾಗಿ, ಅವರಿಗೆ ದೂರು ದಾಖಲಿಸಲು ಯಾವ ಹಕ್ಕಿಲ್ಲ. ಸಿಸಿಬಿಗೆ ಸೇರಿದ ಅಧೀನ ಪೊಲೀಸ್ ಅಧಿಕಾರಿಗೆ ತನಿಖೆ ವರ್ಗಾಯಿಸಲಾಗಿದೆ. ಸಿಸಿಬಿ ಕಚೇರಿಯನ್ನು ಪೊಲೀಸ್ ಠಾಣೆಯೆಂದು ಘೋಷಿಸಲಾಗದು ಹಾಗೂ ಸಿಸಿಬಿ ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಲಾಗದು. ಜೊತೆಗೆ, ಹ್ಯಾಕಿಂಗ್ ಕೃತ್ಯವು ಅಪರಾಧ ಎಂಬುದಾಗಿ ಸದ್ಯ ಇರುವ ಯಾವುದೇ ಕಾನೂನಿನಲ್ಲಿ ಉಲ್ಲೇಖವಾಗಿಲ್ಲ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ಜು.8 ರಂದು ರಾಜ್ಯದ ಎಲ್ಲಕೋರ್ಟ್ಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ : ನ್ಯಾಯಮೂರ್ತಿ ಜಿ.ನರೇಂದ್ರ