ಬೆಂಗಳೂರು: ನಗರ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದ ಐವರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ರೋಹಿತ್ ರೆಡ್ಡಿ, ಶರತ್, ರೋಹಿತ್, ಸಂಪತ್ ಹಾಗೂ ಸಂತೋಷ್ ಬಂಧಿತ ಆರೋಪಿಗಳು. ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಸಿಸಿಟಿವಿ ಕ್ಯಾಮರಾ ನಿಗಾ ಇಲ್ಲದಿರುವ ಜಾಗಗಳಲ್ಲಿ ಬೈಕ್ ನಿಲ್ಲಿಸಿರುವುದನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಇವರು, ಬೈಕ್ ಹ್ಯಾಂಡಲ್ ಮುರಿದು ಕಳ್ಳತನ ಮಾಡುತ್ತಿದ್ದರಂತೆ. ಕಳ್ಳತನ ಮಾಡಿದ ಬಳಿಕ ಬೈಕ್ಗಳನ್ನು ಮಂಡ್ಯ, ಮೈಸೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಗ್ರಾಹಕರು ಏನಾದರೂ ಬೈಕ್ನ ದಾಖಲಾತಿ ಕೇಳಿದರೆ ಊರಿನಲ್ಲಿ ಇದೆ, ತಂದುಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದರಂತೆ. ಕದ್ದ ಬೈಕ್ನಿಂದ ಬಂದ ಹಣದಲ್ಲಿ ಆರೋಪಿಗಳು ಕುಡಿತ-ಮೋಜು ಮಸ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 20 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಂಧನದಿಂದ ಪೀಣ್ಯ, ಜ್ಞಾನ ಭಾರತಿ, ಚಂದ್ರಾ ಲೇಔಟ್, ಸೋಲದೇವನಹಳ್ಳಿ, ಗಂಗಮ್ಮನ ಗುಡಿ, ತಾವರೆಕೆರೆ, ಮೈಸೂರು ಹಾಗೂ ತುಮಕೂರು ನಗರ ಸೇರಿ 13 ಪ್ರಕರಣಗಳನ್ನು ಬೇಧಿಸಿದಂತಾಗಿದೆ.