ಬೆಂಗಳೂರು: ವಿರುದ್ಧ ದಿಕ್ಕಿನಿಂದ ಬೈಕ್ ಚಲಾಯಿಸಿಕೊಂಡು ಬಂದು ಅಪಘಾತವೆಸಗಿದ್ದಲ್ಲದೇ, ಕಾರಿನಲ್ಲಿದ್ದ ದಂಪತಿಯನ್ನು ಐದು ಕಿಲೋಮೀಟರ್ಗಳಷ್ಟು ದೂರದ ತನಕ ಹಿಂಬಾಲಿಸಿದ್ದ ಇಬ್ಬರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಧನುಷ್ (24) ಹಾಗೂ ರಕ್ಷಿತ್ (20) ಬಂಧಿತರು. ಭಾನುವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ವೈಟ್ ಫೀಲ್ಡ್ನಿಂದ ಚಿಕ್ಕನಾಯಕನಹಳ್ಳಿ ಕಡೆ ಸಾಗುತ್ತಿದ್ದ ಕಾರಿಗೆ ಸರ್ಜಾಪುರ ಬಳಿ ತಮ್ಮ ಬೈಕ್‌ನಿಂದ ಅಪಘಾತವೆಸಗಿದ್ದ ಆರೋಪಿಗಳು ಕಾರಿನಲ್ಲಿದ್ದ ದಂಪತಿಗೆ ಕೆಳಗಿಳಿಯುವಂತೆ ಧಮ್ಕಿ ಹಾಕಿದ್ದರು.
ಅಲ್ಲದೆ, ಕಾರಿನಿಂದ ದಂಪತಿ ಇಳಿಯದೇ ಇದ್ದಾಗ ಕಾರಿನ ಮುಂಭಾಗವನ್ನು ಬಡಿಯಲಾರಂಭಿಸಿದ್ದರು. ಗಾಬರಿಗೊಂಡ ದಂಪತಿ ಸ್ಥಳದಿಂದ ಹೊರಟಾಗ ಸುಮಾರು ಐದು ಕಿಲೋಮೀಟರ್ಗಳಷ್ಟು ದೂರ ಹಿಂಬಾಲಿಸಿಕೊಂಡು ಬಂದಿದ್ದರು. ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ಸಂಪೂರ್ಣ ದೃಶ್ಯಗಳು ವೈರಲ್ ಆಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ಳಂದೂರು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ವಿಧಾನಸೌಧ ನೋಡಲು ಬಂದ ವ್ಯಕ್ತಿ ಅಪಘಾತದಲ್ಲಿ ಸಾವು: ಮಧ್ಯರಾತ್ರಿ ವಿಧಾನಸೌಧ ವೀಕ್ಷಣೆಗೆ ಬರುತ್ತಿದ್ದ ಸ್ನೇಹಿತರ ಬೈಕ್ ಅಪಘಾತವಾಗಿದೆ. ಭಾನುವಾರ ತಡರಾತ್ರಿ ಸಂಭವಿಸಿದ ಈ ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದರೆ, ಮತ್ತೋರ್ವ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹೈಗ್ರೌಂಡ್ ಸಂಚಾರಿ ಠಾಣಾ ವ್ಯಾಪ್ತಿಯ ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ಬಳಿ ನಡೆದಿದೆ. ಬೈಕ್ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿಯಾಗಿ ರಾಜೇಶ್ ಎಂಬುವರು ಸಾವನ್ನಪ್ಪಿದ್ದು, ಪರಶುರಾಮ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಎಸಿ ಟೆಕ್ನಿಶಿಯನ್ ಆಗಿದ್ದ ರಾಜೇಶ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಗೋವಿಂದರಾಜು ಹಾಗೂ ಪರಶುರಾಮ ಒಂದೇ ರೂಮಿನಲ್ಲಿ ವಾಸವಿದ್ದವರು. ತಡರಾತ್ರಿ ಮದ್ಯಪಾನ ಮಾಡಿ ವಿಧಾನಸೌಧ ವೀಕ್ಷಿಸಲು ಬೈಕ್‌ನಲ್ಲಿ ತೆರಳಿದ್ದರು. ರಾಜೇಶ್ ಹಾಗೂ ಪರಶುರಾಮ್ ಒಂದು ಬೈಕಿನಲ್ಲಿದ್ದರೆ, ಗೋವಿಂದರಾಜು ಮತ್ತೊಂದು ಬೈಕ್ನಲ್ಲಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ತೆರಳುತ್ತಿರುವಾಗ ಪ್ಯಾಲೇಸ್ ರಸ್ತೆಯ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಪಾದಚಾರಿ ಮಾರ್ಗಕ್ಕೆ ಡಿಕ್ಕಿಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಸ್ನೇಹಿತರಿಬ್ಬರನ್ನು ಗೋವಿಂದರಾಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ ಸಾವನ್ನಪ್ಪಿದ್ದಾರೆ. ಇಬ್ಬರೂ ಮದ್ಯಪಾನ ಮಾಡಿದ್ದು, ಹೆಲ್ಮೆಟ್ ಧರಿಸದೇ ಇದ್ದುದು ಅನಾಹುತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೈಜೀರಿಯಾದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: 11 ಮಂದಿ ಸಜೀವ ದಹನ, ಬಸ್ನಲ್ಲಿ ಸಿಲುಕಿ 9 ಜನ ಸಾವು